ಬೆಂಗಳೂರು, ಏ.30- ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಳೆದ ವಿಧಾನಸಭೆ ಚುನಾವಣೆಗಿಂತ ಈ ಬಾರಿ 54.93 ಕೋಟಿ ರೂ. ನಗದು ಹಾಗೂ 4.65 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 14.42 ಕೋಟಿ ರೂ. ಹಣ ಹಾಗೂ 67,953 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ 28.08 ಕೋಟಿ ರೂ. ನಗದು ಹಾಗೂ 44,924 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 2.8 ಕೋಟಿ ರೂ. ಆಗಿತ್ತು.
ಈ ಬಾರಿಯ ಚುನಾವಣೆ ಸಂದರ್ಭದಲ್ಲಿ 21.78 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಲ್ಯಾಪ್ಟಾಪ್, ಸೀರೆ, ಗೃಹೋಪಯೋಗಿ ವಸ್ತುಗಳು, ಚಿನ್ನ-ಬೆಳ್ಳಿ ಸೇರಿದಂತೆ 38.91 ಕೋಟಿ ರೂ. ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ರೀತಿ ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ 6.78 ಕೋಟಿ ರೂ.ನಷ್ಟಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದುವರೆಗೆ 56.54 ಕೆಜಿ ಚಿನ್ನಹಾಗೂ 10ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ 20,914 ಮಂದಿ ವಿರುದ್ಧ ದೂರು ದಾಖಲಾಗಿದ್ದು, 35,290 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.