ಗ್ಯಾಂಗ್ಟಕ್, ಏ.30-ಈಶಾನ್ಯ ರಾಜ್ಯ ಸಿಕ್ಕಿಂ ಮುಖ್ಯಮಂತ್ರಿ ಹಾಗೂ ಸಿಕ್ಕಿ ಪ್ರಜಾಸತ್ತಾತ್ಮಕ ರಂಗ (ಸಿಡಿಎಫ್) ಧುರೀಣ ಪವನ್ ಕುಮಾರ್ ಚಮ್ಮಿಂಗ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಅತಿ ದೀರ್ಘಾವಧಿ ಅಂದರೆ 25 ವರ್ಷಗಳ ಕಾಲ ಅಧಿಕಾರ ನಡೆಸಿದ ಕೀರ್ತಿಗೆ ಚಮ್ಲಿಂಗ್ ಪಾತ್ರವಾಗಿದ್ದಾರೆ.
67 ವರ್ಷಗ ಅವರು ಮೊದಲ ಬಾರಿಗೆ 1994ರಲ್ಲಿ ಸಿಕ್ಕಿಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆಗಿನಿಂದ ಇಂದಿನವರೆಗೆ ಸತತ ಎರಡೂವರೆ ದಶಕಗಳ ಕಾಲ ಅವರು ಸಿಎಂ ಸ್ಥಾನದಲ್ಲಿ ಮುಂದುವರಿದು ದಾಖಲೆ ನಿರ್ಮಿಸಿದ್ದಾರೆ.
ಈ ಹಿಂದೆ ಕಮ್ಯೂನಿಷ್ಟ್ ಪಕ್ಷದ ಧುರೀಣ ಜ್ಯೋತಿ ಬಸು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 23 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಈಗ ಬಸು ಅವರ ದಾಖಲೆಯನ್ನು ಪವನ್ ಕುಮಾರ್ ಚಮ್ಲಿಂಗ್ ಮುರಿದಿದ್ದಾರೆ.
1993ರಲ್ಲಿ ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್ ಪಕ್ಷ ಸ್ಥಾಪಿಸಿದ ಅವರು, ನ್ಯೂ ಸಿಕ್ಕಿಂ ಹ್ಯಾಪಿ, ಸಿಕ್ಕಿಂ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದರು. ವಿವಾದಗಳಿಲ್ಲದೇ ದಕ್ಷ ಆಡಳಿತ ಮತ್ತು ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಚಮ್ಲಿಂಗ್ ಈಶಾನ್ಯ ರಾಜ್ಯದಲ್ಲಿ ಜನಪ್ರಿಯತೆ ಪಡೆದಿದ್ದಾರೆ.