ಮೈಸೂರು,ಏ.30- ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಯನ್ನು ನಾಲ್ಕನೇ ಬಾರಿ ಬದಲಾವಣೆ ಮಾಡಲಾಗಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಭಿರಾಮ್ ಜಿ.ಶಂಕರ್ ಅವರನ್ನು ನೇಮಿಸಲಾಗಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ ಮೈಸೂರಿಗೆ ನಿಯೋಜನೆಗೊಂಡಿದ್ದ ಮೂವರು ಡಿಸಿಯನ್ನು ವರ್ಗಾವಣೆ ಮಾಡಿದ್ದು, ಇದೀಗ ನಾಲ್ಕನೇ ಬಾರಿ ನೂತನ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರಂದೀಪ್ ಅವರನ್ನು ರಾಜ್ಯ ಸರ್ಕಾರ ಹಾಸನ ಜಿಲ್ಲಾಧಿಕಾರಿಯಾಗಿ ಮಾ.8ರಂದು ವರ್ಗಾವಣೆ ಮಾಡಿತ್ತು. ತದನಂತರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂ ಅವರು ಕೆಎಟಿ ಮೆಟ್ಟಿಲೇರಿದ್ದರು.
ಹಾಗಾಗಿ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ಕೆ.ಬಿ.ಶಿವಕುಮಾರ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಆದರೆ ರಿಲೀವ್ ಆಗಿದ್ದ ಶಿವಕುಮಾರ್ ಅವರು ಮಾ.12ರಂದು ಮೈಸೂರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದರು.
ಸುಮಾರು ಒಂದು ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶಿವಕುಮಾರ್ ಅವರನ್ನು ಚುನಾವಣಾ ಆಯೋಗದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಏ.14ರಂದು ವರ್ಗಾವಣೆ ಮಾಡಿತ್ತು.
ಈ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ದರ್ಪಣ್ ಜೈನ್ ಅವರನ್ನು ನಿಯೋಜಿಸಲಾಗಿತ್ತು. ಏ.17ರಂದು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ದರ್ಪಣ್ ಜೈನ್ ಅವರನ್ನು ಇದೀಗ ಮತ್ತೆ ವರ್ಗಾವಣೆ ಮಾಡಿದೆ. ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ರಾಯಚೂರಿನ ಜಿಪಂನ ಸಿಇಒ ಆಗಿದ್ದ ಅಭಿರಾಮ್ .ಜಿ.ಶಂಕರ್ ಅವರನ್ನು ನೇಮಿಸಲಾಗಿದ್ದು, ಸದ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.
ಚುನಾವಣೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಚುನಾವಣಾಧಿಕಾರಿಗಳ ವರ್ಗಾವಣೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.