ಬೆಂಗಳೂರು,ಏ.30- ನಟ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ತೀರ್ಪುಗಾರರಾಗಿ ಭಾಗವಹಿಸುವ ಖಾಸಗಿ ವಾಹಿನಿಯ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಜೆಡಿಎಸ್, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ.
ಜಗ್ಗೇಶ್ ಅವರು ಖಾಸಗಿ ವಾಹಿನಿಯೊಂದರಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ರಾತ್ರಿ 9ರಿಂದ 10ವರೆಗೆ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್-2 ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಲ್ಳುತ್ತಿದ್ದಾರೆ.
ಅವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಈ ಕಾರ್ಯಕ್ರಮ ಚುನಾವಣೆ ಮುಗಿಯುವವರೆಗೂ ಪ್ರಸಾರವಾಗದಂತೆ ತಡೆ ನೀಡಬೇಕು, ಖಾಸಗಿ ಚಾನೆಲ್ಗೂ ನಿರ್ದೇಶನ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಜೆಡಿಎಸ್ ಕಾನೂನು ಘಟಕ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಪ್ರದೀಪ್ ಕುಮಾರ್ ಈ ಸಂಬಂಧ ದೂರು ನೀಡಿ ಕ್ರಮ ಜರುಗಿಸುವಂತೆ ಕೋರಿದ್ದಾರೆ.