ಡೆಹ್ರಾಡೂನ್/ಕೇದಾರನಾಥ, ಏ.29-ಜಗತ್ಪ್ರಸಿದ್ಧ ಕೇದಾರನಾಥ ಯಾತ್ರೆ ಇಂದಿನಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ಸಹಸ್ರಾರು ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಹಿಮಾಲಯ ದೇಗುಲದ ಪ್ರವೇಶದ್ವಾರ ಇಂದು ತೆರೆದಿದ್ದು ಮುಂಜಾನೆ ಮೈ ಕೊರೆಯುವ ಚಳಿಯನ್ನು ಲೆಕ್ಕಸದೆ ಭಕ್ತ ಸಾಗರ ಕೇದಾರನಾಥನ ದರ್ಶನ ಪಡೆದರು.
ಆರು ತಿಂಗಳ ಚಳಿಗಾಲದ ನಂತರ ಇಂದು ಕೇದಾರ ಮಂದಿರ ಭಕ್ತ ಮಹಾಶಯರ ವೀಕ್ಷಣೆ ಮತ್ತು ಪೂಜೆ ಸಮರ್ಪಣೆಗೆ ಮುಕ್ತವಾಗಿದೆ.
ಇಂದು ಮುಂಜಾನೆ 6.15ರಲ್ಲಿ ಕೇದಾರನಾಥ ದೇಗುಲದ ಮುಖ್ಯ ಅರ್ಚಕ ಜಗದ್ಗುರು ರಾವಲ್ ಭೀಮಾಶಂಕರ ಲಿಂಗ ಶಿವಾಚಾರ್ಯ ಅವರಿಂದ ದ್ವಾರಗಳನ್ನು ವಿಧ್ಯುಕ್ತವಾಗಿ ತೆರೆಯಲಾಯಿತು. ಉತ್ತರಖಂಡ ರಾಜ್ಯಪಾಲ ಕೆ.ಕೆ.ಪಾಲ್ ಮತ್ತು ವಿಧಾನಸಭಾಧ್ಯಕ್ಷ ಪ್ರೇಮ್ಚಂದ್ ಅಗರ್ವಾಲ್ ಮಂದಿರಕ್ಕೆ ಪ್ರಥಮ ಭೇಟಿ ನೀಡಿ ವಿಶೇಷ ಪೂಜೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಇತರ ಅರ್ಚಕರು, ಧಾರ್ಮಿಕ ಮುಖಂಡರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು. ಮಹಾದ್ವಾರ ಮತ್ತು ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಅಲ್ಲಿ ಸಡಗರ-ಸಂಭ್ರಮ ಮನೆಮಾಡಿದೆ.
ಉಖಿಮಠದ ಓಂಕಾರೇಶ್ವರ ದೇವಸ್ಥಾನದಿಂದ ಪುಷ್ಪ ಪಲ್ಲಕಿಯಲ್ಲಿ ಬಾಬಾ ಕೇದಾರನಾಥನ ಪುತ್ಥಳಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತಂದು ವೇದಘೋಷಗಳ ನಡುವೆ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದವು.
ಇಂದು ಕೇದಾರನಾಥ ಮಂದಿರ ಭಕ್ತರ ವೀಕ್ಷಣೆಗೆ ತೆರೆಯಲಾಗಿದ್ದರೆ, ನಾಳೆ ವಿಶ್ವವಿಖ್ಯಾತ ಬದರೀನಾಥ ದೇವಸ್ಥಾನಕ್ಕೆ ಭಕ್ತಾದಿಗಳ ಯಾತ್ರೆ ವಿದ್ಯುಕ್ತವಾಗಿ ಆರಂಭವಾಗಲಿದೆ.
ಏ.18ರಿಂದ ಆರಂಭವಾಗಿರುವ ಯಮುನೋತ್ರಿ-ಗಂಗೋತ್ರಿ ಪಾವನಯಾನದ 11 ದಿನಗಳ ನಂತರ ಕೇದಾರನಾಥ್-ಬದರೀನಾಥ್ ಯಾತ್ರೆಗೆ ಚಾಲನೆ ದೊರೆಯುತ್ತದೆ.
ಡೆಹ್ರಾಡೂನ್ ವರದಿ: ಗರ್ವಾಲ್ ಹಿಮಾಲಯದಲ್ಲಿನ ಕೇದಾರನಾಥ ಯಾತ್ರೆಗೆ ನಿನ್ನೆಯೇ ಉತ್ತರಖಂಡ ರಾಜ್ಯಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸ್ವಾಗತ ಕೋರಿದರು. ಭಕ್ತರ ನೆರವಿಗಾಗಿ ರಾಜ್ಯ ಸರ್ಕಾರ ವಿಶೇಷ ಸ್ಲೆ ೈಡ್ ಶೋ ವ್ಯವಸ್ಥೆ ಮಾಡಿತ್ತು. ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.