
ಮೈಸೂರು, ಏ.29- ಫಲಿತಾಂಶ ಏನೇ ಆದರೂ ಈ ಬಾರಿ ಸರ್ಕಾರ ನಮ್ಮದೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖಡಕ್ಕಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿಗಿಂತ ಶೇಕಡವಾರು ಹೆಚ್ಚು ಸ್ಥಾನಗಳನ್ನು ನಮ್ಮ ಪಕ್ಷ ಪಡೆಯಲಿದೆ. ಫಲಿತಾಂಶ ಏನೇ ಆಗಲಿ ನಾವೇ ಅಧಿಕಾರ ಹಿಡಿಯಲಿದ್ದೇವೆ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ನಾಲ್ಕಾಣಿ ಏಜೆನ್ಸಿಗಳು ನಮ್ಮ ಪಕ್ಷ 36, 38, 40 ಸ್ಥಾನಗಳು ಬರುತ್ತವೆ ಎಂದು ಹೇಳುತ್ತಿವೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷದ ಸಾಮಥ್ರ್ಯ ಏನೆಂಬುದು ನನಗೆ ಗೊತ್ತು. ಈ ಬಾರಿ ನಾವು ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ತಮ್ಮ ಖಡಕ್ ಭಾಷೆಯಲ್ಲೇ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ವರ್ಚಸ್ಸಿನಿಂದ ಹತಾಶರಾಗಿದ್ದಾರೆ. ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಮುಸ್ಲಿಂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮುಸ್ಲಿಮರನ್ನು ನಾವು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಳ್ಳುವವರು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕಡೆಗಳಲ್ಲಿ ಏಕೆ ಸ್ಪರ್ಧಿಸಬೇಕಿತ್ತು ಎಂದು ಸಿಎಂ ಅವರನ್ನು ಪ್ರಶ್ನಿಸಿದ ಅವರು, ನುಡಿದಂತೆ ಅವರು ನಡೆದಿದ್ದರೆ ಚಾಮುಂಡೇಶ್ವರಿ ಒಂದರಲ್ಲೇ ಸ್ಪರ್ಧಿಸಬಹುದಿತ್ತು. ಅವರು ನುಡಿದಂತೆ ನಡೆಯದೆ ಇರುವುದರಿಂದ ಎರಡು ಕಡೆಗಳಲ್ಲಿ ಸ್ಪರ್ಧಿಸುವ ಪರಿಸ್ಥಿತಿ ಬಂದಿದೆ ಎಂದು ಕುಟುಕಿದರು.
ಅವರು ಮಾಡಿರುವ ತಪ್ಪುಗಳು ಒಂದೆರಡಲ್ಲ. ಅನ್ನಭಾಗ್ಯ, ಅಕ್ಕಿಭಾಗ್ಯ ಎಂದು ಒಂದರ ಹಿಂದೆ ಒಂದು ತಪ್ಪನ್ನು ಈ ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ ಎಂದ ಅವರು, 1983ರಲ್ಲಿ ಎಲ್ಲಿದ್ದರು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮೇಲೆತ್ತಿದವರು ಯಾರು ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಸಂಸ್ಥೆ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಅದನ್ನು ನಿಲ್ಲಿಸಿ ಎಸಿಬಿ ರಚಿಸಿದ್ದಾರೆ. ಎಸಿಬಿ ಇದುವರೆಗೂ ಏನು ಮಾಡಿದೆ ಎಂದು ಕಿಡಿಕಾರಿದರು.
ಅಹಿಂದವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಸಿದ್ದರಾಮಯ್ಯ, ಆಡಳಿತ ಹಿಡಿಯಲು ಮುಂದಾಗಿದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಚಾಮುಂಡೇಶ್ವರಿ ಕ್ಷೇತ್ರವೊಂದೆ ಪ್ರತಿಷ್ಠಿತ ಕ್ಷೇತ್ರವಲ್ಲ. ರಾಜ್ಯದಲ್ಲಿ ಎಲ್ಲವೂ ಪ್ರತಿಷ್ಠಿತ ಕ್ಷೇತ್ರಗಳೇ. ಆದರೆ, ಮಾಧ್ಯಮಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರವನ್ನು ಆ ರೀತಿ ಬಿಂಬಿಸಲಾಗಿದೆ. ಅಲ್ಲಿನ ನಮ್ಮ ಅಭ್ಯರ್ಥಿ ಪ್ರಬಲರಾಗಿದ್ದಾರೆ ಎಂದು ಹೇಳಿದರು.
ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸಾಮಾಜಿಕ ಸಂಬಂಧ ಉತ್ತಮವಾಗಿದೆ. ಆದರೆ, ನನ್ನ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧವೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಮರಿಸ್ವಾಮಿ ಧೈರ್ಯವಾಗಿ ಮಾತನಾಡಲು ಮತದಾರರಿಗೆ ಶಕ್ತಿ ಬಂದಿರುವುದೇ ಕಾರಣ. ಅವರು ಹಾಗೇ ಧೈರ್ಯವಾಗಿ ಮಾತನಾಡದೆ ಇದ್ದಿದ್ದರೆ ಮೇ 12ರ ನಂತರ ಸಿದ್ದರಾಮಯ್ಯ ಸಿಗುತ್ತಾರ ಎಂದು ಮರು ಪ್ರಶ್ನೆ ಹಾಕಿದರು.