ಬಾಗಲಕೋಟೆ, ಏ.29- ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನ ನೀಡುವ ತೀರ್ಪು ಐತಿಹಾಸಿಕ ವಾಗಲಿದ್ದು, ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಧೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜೆಡಿಎಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಬಿಜೆಪಿಯವರ ಬಣ್ಣದ ಮಾತಿಗೆ ಮರುಳಾಗದೆ ಕಾಂಗ್ರೆಸ್ಗೆ ಮತ ಹಾಕಿ ಮನವಿ ಮಾಡಿದರು.
ಬಿ.ಎಸ್.ಯಡಿಯೂರಪ್ಪ, ಜನಾರ್ಧನರೆಡ್ಡಿ, ಕೃಷ್ಣಯ್ಯಶೆಟ್ಟಿ, ಹಾಲಪ್ಪ ಜೈಲಿಗೆ ಬೀಗತನ ಮಾಡಲು ಹೋಗಿದ್ದರೇ? ಸತ್ಯ ಹೇಳಿದರೆ ಯಡಿಯೂರಪ್ಪ ಅವರಿಗೆ ಸಿಟ್ಟು ಬರುತ್ತದೆ ಎಂದು ಹೇಳಿದರು.
ಹರತಾಳ ಹಾಲಪ್ಪ ಕಾಂಗ್ರೆಸ್ ಸೇರಲು ಮುಂದಾಗಿದ್ದಾಗ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯ ಅವರು ಹಾಲಪ್ಪ ವಿರುದ್ಧ ದಾಖಲಾಗಿದ್ದ ಕೇಸು ನ್ಯಾಯಾಲಯದಲ್ಲಿ ವಜಾ ಆಗಿದೆ ಎಂದಿದ್ದರು.
ಹಾಲಪ್ಪ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಚುನಾವಣೆ ಪ್ರಚಾರದ ವೇಳೆ ಜೈಲಿಗೆ ಹೋಗಿಬಂದವರ ಹೆಸರಿನಲ್ಲಿ ಹಾಲಪ್ಪ ಅವರ ಹೆಸರನ್ನೂ ಸೇರಿಸಿ ಸಿದ್ದರಾಮಯ್ಯ ಟೀಕಿಸಲು ಆರಂಭಿಸಿದ್ದಾರೆ.
ಬಿಜೆಪಿ ದಲಿತರನ್ನು ಅವಮಾನಿಸುತ್ತಿದೆ. ಗ್ರಾ.ಪಂ.ಸದಸ್ಯನಾಗಲೂ ಯೋಗ್ಯತೆ ಇಲ್ಲದ ಅನಂತ್ಕುಮಾರ್ ಹೆಗಡೆಯನ್ನು ಪ್ರಧಾನಿ ಮೋದಿಯವರು ಕೇಂದ್ರ ಸಚಿವನನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಅವರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲಿಲ್ಲ. ಕೇಂದ್ರ ಸರ್ಕಾರವೂ ರೈತರ ಸಾಲ ಮನ್ನಾ ಮಾಡಲಿಲ್ಲ.ಬಿಜೆಪಿಯವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದ ಅವರು, ನಾವು ರೈತರ ಸಾಲ ಮನ್ನಾ ಮಾಡಿದ್ದೇವೆ. ದಲಿತರ ಅಭಿವೃದ್ಧಿಗೆ ಪ್ರತ್ಯೇಕ ಕಾಯ್ದೆ ರೂಪಿಸಿದ್ದೇವೆ ಎಂದು ಹೇಳಿದರು.
ಸಚಿವ ಆರ್.ಬಿ.ತಿಮ್ಮಾಪುರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಾನೇ ಸಲಹೆ ನೀಡಿದ್ದೆ. ಅವರಿಗೆ ಇನ್ನೂ ವಿಧಾನಪರಿಷತ್ ಸ್ಥಾನ ಇದೆ. ಮುಧೋಳದಲ್ಲಿ ಸತೀಶ್ ವಡ್ಡರ್ ಈ ಬಾರಿ ಗೆದ್ದರೆ ಮುಂದಿನ ಬಾರಿ ಆರ್.ಬಿ.ತಿಮ್ಮಾಪುರ್ ಅವರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಹಾಗಾಗಿ ಆರ್.ಬಿ.ತಿಮ್ಮಾಪುರ್ ಪರವಾಗಿ ಯಾರೂ ಅಸಮಾಧಾನಗೊಳ್ಳುವುದು ಬೇಡ ಎಂದು ಮನವಿ ಮಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಯಾಗಿಲ್ಲ. ಮಾತೆತ್ತಿದರೆ ಅಚ್ಛೆ ದಿನ್ ಎನ್ನುತ್ತಾರೆ. ಯಾರಿಗೆ, ಎಲ್ಲಿಗೆ ಅಚ್ಚೇ ದಿನ್ ಬಂದಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮೋದಿ ಮಹಾನ್ ಸುಳ್ಳುಗಾರ ಎಂದು ಟೀಕಿಸಿದರು.
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ದಲಿತ ಮುಖಂಡರಾದ ರಮೇಶ್ ಜಿಗಜಿಣಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರ ಜೊತೆ ಸಂವಿಧಾನ ಬದಲಾವಣೆಯಾಗಬೇಕು ಎಂಬ ಅನಂತ್ಕುಮಾರ್ ಹೆಗಡೆ ಕೂಡ ಸಚಿವರಾಗಿದ್ದಾರೆ. ಅಧಿಕಾರ ಶಾಶ್ವತವಲ್ಲ, ಸ್ವಾಭಿಮಾನ ಮುಖ್ಯ. ರಮೇಶ್ ಜಿಗಜಿಣಗಿ ಕೇಂದ್ರ ಸಚಿವ ಸ್ಥಾನವನ್ನು ತೊರೆದು ಸಂವಿಧಾನದ ಪರ ನಿಲ್ಲಬೇಕು ಎಂದು ಕರೆ ನೀಡಿದರು.
ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಜಾತಿ, ಧರ್ಮ ಆಧಾರಿತವಾಗಿ ನಡೆಯುವ ಇಂತಹ ಹಿಂಸೆಗಳು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಟಗರು ಗುದ್ದಿದರೆ ಎಂತಹ ನೋವಾಗುತ್ತದೆ ಎಂದು ಬಳ್ಳಾರಿ ಜನಾರ್ಧನರೆಡ್ಡಿಗೆ ಚೆನ್ನಾಗಿ ಗೊತ್ತಾಗಿದೆ. ಬಿಜೆಪಿಯವರು ಅವರನ್ನು ಕೇಳಿ ತಿಳಿದುಕೊಳ್ಳಲಿ. ಮೋದಿಯವರ ಬಳಿ ಭಜರಂಗ ದಳ ಇದೆ. ಸಿದ್ದರಾಮಯ್ಯ ಅವರ ಜತೆ ಕನಕದಳ, ಬಸವದಳ, ರಾಣಿ ಚೆನ್ನಮ್ಮ-ಸಂಗೊಳ್ಳಿರಾಯಣ್ಣ ದಳಗಳಿವೆ ಎಂದು ಹೇಳಿದರು.
ಜನಾರ್ಧನರೆಡ್ಡಿ ಅವರು ಬಳ್ಳಾರಿಯಲ್ಲಿ ಭೂಮಿ ಅಗೆದು ಅದಿರು ತೆಗೆದರು. ಬಾದಾಮಿಯಲ್ಲಿ ಶ್ರೀರಾಮುಲು ಗೆದ್ದರೆ ಬೆಟ್ಟ, ಗುಡ್ಡ, ಗುಹೆಗಳು ನಾಶವಾಗುತ್ತವೆ ಎಂದರು.
ಸಚಿವ ಆರ್.ಬಿ.ತಿಮ್ಮಾಪುರ್, ಕಾಂಗ್ರೆಸ್ ನಾಯಕ ಎಸ್.ಆರ್.ನಾಯಕ್, ಅಭ್ಯರ್ಥಿ ಸತೀಶ್ ವಡ್ಡರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.