ರಾಮನಗರ, ಏ.29- ಇಲ್ಲಿನ ಪ್ರಸಿದ್ಧ ರೇವಣ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದ ಕೊಂಡೋತ್ಸವದಲ್ಲಿ ಪ್ರಧಾನ ಅರ್ಚಕರು ಕೊಂಡ ಹಾಯುವಾಗ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇಂದು ಮುಂಜಾನೆ ದೇವರ ಪೂಜೆ ಬಳಿಕ ಕೊಂಡ ಹಾಯುವ ಕಾರ್ಯಕ್ರಮವಿತ್ತು. ಇದಕ್ಕಾಗಿ ನೂರಾರು ಮಂದಿ ಭಕ್ತರು ಆಗಮಿಸಿದ್ದರು. ಅರ್ಚಕ ವಿಜಯಕುಮಾರ್ ಅವರು ಕಳಸ ಹೊತ್ತು ಕೊಂಡ ಹಾಯುವಾಗ ಮಧ್ಯದಲ್ಲಿ ಎಡವಿ ಕೆಂಡದಲ್ಲಿ ಬಿದ್ದಿದ್ದಾರೆ.
ತಕ್ಷಣ ಅವರ ನೆರವಿಗೆ ಬಂದ ಭಕ್ತರು ಮೇಲೆತ್ತಿ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುಮಾರು 40ರಷ್ಟು ದೇಹ ಭಾಗ ಸುಟ್ಟು ಗಾಯಗಳಾಗಿದ್ದು , ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯಿಂದಾಗಿ ಭಕ್ತರು ಗಾಬರಿಗೊಂಡು ಯಾವುದೇ ಅನಾಹುತ ಸಂಭವಿಸಬಾರದೆಂದು ದೇವರಲ್ಲಿ ಪ್ರಾರ್ಥಿಸಿದರು.