ಕನಕಪುರ, ಏ.29- ಬುದ್ಧಿಮಾತು ಹೇಳಿದ ತಾತನನ್ನು ಮೊಮ್ಮಗಳೇ ಕೊಲೆ ಮಾಡಿರುವ ನಿರ್ದಯಿ ಪ್ರಕರಣ ಕೋಡಿಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೊಮ್ಮಗಳು ಶಿಲ್ಪಾ (30) ಕೊಲೆಗಾರ್ತಿಯಾದರೆ, ತಾತ ಮಲ್ಲಣ್ಣ (70) ಮೃತಪಟ್ಟ ದುರ್ದೈವಿ.
ಇಂದು ಬೆಳಗ್ಗೆ ಕೋಡಿಹಳ್ಳಿ ಸಮೀಪದ ಕೆಳಗಿನ ಕೆಬ್ಬರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಿಲ್ಪಾ , ತಾತ ಮಲ್ಲಣ್ಣನಿಗೆ ಕಾಫಿ ಕೊಡದ ಹಿನ್ನೆಲೆಯಲ್ಲಿ ಮಲ್ಲಣ್ಣ ಹಿರಿಯರ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ ಎಂದು ಗೊಣಗುತ್ತಿದ್ದಾಗ ತಾಳ್ಮೆ ಕಳೆದುಕೊಂಡ ಶಿಲ್ಪಾ ಪಕ್ಕದಲ್ಲೇ ಬಿದ್ದಿದ್ದ ಮರದ ದಿಮ್ಮಿಯಿಂದ ಮಲ್ಲಣ್ಣನ ತಲೆಗೆ ಹೊಡೆದಳು.
ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಮಲ್ಲಣ್ಣನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ತಾತ ಮೃತಪಟ್ಟಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಹಿನ್ನೆಲೆ: ಮಲ್ಲಣ್ಣನ ಮಗಳ ಮಗಳಾಗಿದ್ದ ಶಿಲ್ಪಾಳನ್ನು ತನ್ನ ಮಗನಿಗೆ ವಿವಾಹ ಮಾಡಿಕೊಡಲಾಗಿತ್ತು. ಶಿಲ್ಪಾಳಿಗೆ ಸೋದರ ಮಾವನನ್ನು ವರಿಸಲು ಇಷ್ಟವಿರಲಿಲ್ಲ. ಆದರೂ ಹಿರಿಯರ ಮಾತಿಗೆ ಕಟ್ಟುಬಿದ್ದು ಸೋದರ ಮಾವ ಪಂಕಜ್ನನ್ನು ವರಿಸಿದ್ದಳು.
ಈ ಕುರಿತಂತೆ ಮಲ್ಲಣ್ಣನ ಕುಟುಂಬದಲ್ಲಿ ಪ್ರತಿನಿತ್ಯ ಜಗಳವಾಗುತ್ತಿತ್ತು. ಮಲ್ಲಣ್ಣನನ್ನು ಕಂಡರೆ ಸೊಸೆ ಹಾಗೂ ಮೊಮ್ಮಗಳಾದ ಶಿಲ್ಪಾಳಿಗೆ ಆಗುತ್ತಿರಲಿಲ್ಲ.
ಮಾವ-ಸೊಸೆಯ ಪ್ರತಿನಿತ್ಯದ ಜಗಳವನ್ನು ಸಹಿಸಲಾರದೆ ಪಂಕಜ್ ಊರು ತೊರೆದು ಬೆಂಗಳೂರು ಸೇರಿಕೊಂಡಿದ್ದ. ಮಾತ್ರವಲ್ಲ, ಇತ್ತೀಚೆಗೆ ಸುಮಾ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದ.
ಕಳೆದ ಕೆಲ ದಿನಗಳ ಹಿಂದೆ ಸುಮಾಳೊಂದಿಗೆ ಕೆಬ್ಬರೆಗೆ ಹಿಂದಿರುಗಿದ್ದ ಪಂಕಜ್, ಸುಮಾಳಿಗೆ ಬೇರೆ ಮನೆ ಮಾಡಿಕೊಟ್ಟಿದ್ದ. ಈ ಕುರಿತಂತೆ ಪಂಕಜ್ ಮತ್ತು ಶಿಲ್ಪಾ ನಡುವೆ ಜಗಳ ನಡೆದು ಪೆÇಲೀಸರು ರಾಜಿ ಪಂಚಾಯ್ತಿ ಮಾಡಿಸಿದ್ದರು.
ನನ್ನ ಕುಟುಂಬ ಈ ಸ್ಥಿತಿಗೆ ಬರಲು ಮಲ್ಲಣ್ಣ ಕಾರಣ ಎಂದು ಮನಸ್ಸಿನಲ್ಲೇ ಕುದಿಯುತ್ತಿದ್ದ ಶಿಲ್ಪಾಳ ಕೋಪದ ಕಟ್ಟೆಯೊಡೆದ ಪರಿಣಾಮ ಮಲ್ಲಣ್ಣನನ್ನು ಬಲಿ ತೆಗೆದುಕೊಂಡಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೋಡಿಹಳ್ಳಿ ಪೆÇಲೀಸರು ಶಿಲ್ಪಾಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.