
ಅಹಮದ್‍ನಗರ (ಮಹಾರಾಷ್ಟ್ರ), ಏ.29-ಮೂವರು ಅಪರಿಚಿತ ಹಂತಕರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‍ಸಿಪಿ) ಇಬ್ಬರು ಯುವ ಮುಖಂಡರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇದೇ ಜಿಲ್ಲೆಯಲ್ಲಿ ಕಳೆದ ಮೂರು ವಾರಗಳ ಹಿಂದಷ್ಟೇ ಇದೇ ರೀತಿ ಇಬ್ಬರು ಸ್ಥಳೀಯ ಶಿವಸೇನೆ ಮುಖಂಡರನ್ನು ಹಂತಕರು ಗುಂಡಿಟ್ಟು ಕೊಂದ ಬೆನ್ನಲ್ಲೇ ಇಬ್ಬರು ಎನ್‍ಸಿಪಿ ಯುವ ನಾಯಕರು ಬಲಿಯಾಗಿದ್ದಾರೆ.
ಎನ್‍ಸಿಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ಅಂಬದಾಸ್ ರಾಳೆಭಟ್(30) ಹಾಗೂ ಕಾರ್ಯಕಾರಿ ಸದಸ್ಯ ಹಗೂ ಅಹಮದ್‍ನಗರದ ಜೆಮ್‍ಖಡ್ ಘಟಕದ ಪದಾಧಿಕಾರಿ ರಾಕೇಶ್ ಅರ್ಜುನ್ ರಾಳೆಭಟ್(23) ದುಷ್ಕರ್ಮಿಗಳ ಗುಂಡೇಟಿಗೆ ಹತರಾದ ಯುವ ನೇತಾರರು. ಇವರಿಬ್ಬರು ಜೆಮ್‍ಖೇಡ್ ನಿವಾಸಿಗಳು.
ಅಹಮದ್‍ನಗರದಿಂದ 70 ಕಿ.ಮೀ.ದೂರದಲ್ಲಿರುವ ಜಮ್‍ಖೇಡ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಿನ್ನೆ ರಾತ್ರಿ 6.20ರ ಸಮಯದಲ್ಲಿ ಇಬ್ಬರು ನಿಂತಿದ್ದರು. ಇದೇ ಸಮಯದಲ್ಲಿ ಒಂದೇ ಮೋಟಾರ್ ಬೈಕಿನ ಮೇಲೆ ಅಲ್ಲಿಗೆ ಬಂದ ಮೂವರು ದುಷ್ಕರ್ಮಿಗಳು ಎಂಟು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾದರು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜನ್‍ಕುಮಾರ್ ಶರ್ಮ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮ್ ಶಿಂಧೆ ನಿನ್ನೆ ರಾತ್ರಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹತರಾದ ಮೃತದೇಹಗಳನ್ನು ವೀಕ್ಷಿಸಿದರು. ಆಸ್ಪತ್ರೆ ಹೊರೆಗೆ ಉದ್ರಿಕ್ತ ಎನ್‍ಸಿಪಿ ಕಾರ್ಯಕರ್ತರು ಸರ್ಕಾರ ಮತ್ತು ಸಚಿವರ ವಿರುದ್ಧ ಘೋಷಣೆ ಕೂಗಿದರು.
ಇಬ್ಬರ ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಂತಕರ ಸೆರೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಏಪ್ರಿಲ್ 7ರಂದು ಮೋಟಾರ್‍ಸೈಕಲ್ ಮೇಲೆ ಬಂದ ಇಬ್ಬರು ಹಂತಕರು ಇದೇ ಜಿಲ್ಲೆಯ ಕೆಡ್‍ಗಾಂವ್‍ನ ಶಾಹುನಗರದಲ್ಲಿ ಇಬ್ಬರು ಸ್ಥಳೀಯ ಶಿವಸೇನೆ ಮುಖಂಡರ ಮೇಲೆ ಗುಂಡು ಹಾರಿಸಿ ಪರಾರಿಯಾದರು. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಘೋಷಣೆ ನಂತರ ಈ ಹತ್ಯೆ ನಡೆದಿತ್ತು.