ನವದೆಹಲಿ, ಏ.29-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಬೇರುಗಳು ಬಲಿಷ್ಠವಾಗುತ್ತಿವೆ ಎಂದು ಟೀಕಿಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಜನ ಆಕ್ರೋಶ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾನೂ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಹಾಗೂ ಇತರರಿಗೂ ಅವಕಾಶ ನೀಡುವುದಿಲ್ಲ ಎಂಬ ಮೋದಿ ಅವರ ಭರವಸೆ ಘೋಷಣೆ ಏನಾಯಿತು ಎಂದು ಪ್ರಶ್ನಿಸಿದರು.
ಮೋದಿ ನೇತೃತ್ವದ ಸರ್ಕಾರವು ಧ್ವನಿಗಳನ್ನು ದಮನ ಮಾಡುತ್ತಿವೆ. ನ್ಯಾಯಾಂಗ ಮತ್ತು ಕಾರ್ಯಾಂಗದಂಥ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ಚುನಾವಣೆ ಲಾಭಕ್ಕಾಗಿ ಸಮುದಾಯಗಳನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಆರೋಪಿಸಿದರು.
ನ್ಯಾಯಾಂಗ ವ್ಯವಸ್ಥೆಯು ಹಿಂದೆಂದೂ ಕಂಡುಕೇಳರಿಯದ ಬಿಕ್ಕಟ್ಟಿನ ಮೂಲಕ ಹಾದು ಹೋಗುತ್ತಿದೆ. ಮಾಧ್ಯಮಗಳು ತನ್ನ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ಅಡ್ಡಿಯಾಗಿದೆ. ಇದೊಂದು ಸೂಕ್ಷ್ಮ ಹಂತ. ಈ ಸನ್ನಿವೇಶಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಜನರ ಪರವಾಗಿ ನಾವು ಇದರ ವಿರುದ್ಧ ಹೋರಾಡುತ್ತೇವೆ ಎಂದು ಸೋನಿಯಾ ಗಾಂಧಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವವರು (ಬಿ.ಎಸ್.ಯಡಿಯೂರಪ್ಪ) ಜೈಲಿಗೆ ಹೋಗಿ ಬಂದಿದ್ದಾರೆ. ಇಂಥವರನ್ನೇ ಪ್ರಧಾನಿ ನರೇಂದ್ರ ಮೋದಿ ಮತ್ತೆ ಸಿಎಂ ಅಭ್ಯರ್ಥಿಯಾಗಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಭ್ರಷ್ಟಾಚಾರ, ಲಂಚ ಪ್ರಕರಣ ಮತ್ತು ಹಗರಣಗಳ ಬಗ್ಗೆ ಚೌಕಿದಾರ್ (ಮೋದಿ) ಒಂದೇ ಒಂದು ಮಾತನ್ನು ಆಡಿಲ್ಲ. ದೇಶದ ಪ್ರಮುಖ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಛೇಡಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಿದ್ದವರು ಭಾರೀ ಭ್ರಷ್ಟಾಚಾರದಲ್ಲಿ ಮಿಂದೆದಿದ್ದಾರೆ. ಈಗ ಅವರನ್ನೇ ಮೋದಿ ಮತ್ತೆ ಸಿಎಂ ಅಭ್ಯರ್ಥಿಯಾಗಿಸಿದ್ದಾರೆ. ದೇಶದ ಪ್ರಧಾನಿ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ರಾಹುಲ್ ಟೀಕಿಸಿದರು.
ಪ್ರಧಾನಿ ಬಗ್ಗೆ ದೇಶದ ಜನರಲ್ಲಿ ತೀವ್ರ ಆಕ್ರೋಶವಿದೆ. ನಾನು ಜನರೊಂದಿಗೆ ಮಾತನಾಡಿದಾಗ ಅವರು ಮೋದಿ ಬಗ್ಗೆ ಖುಷಿಯಾಗಿಲ್ಲ. ರೈತರು, ಕಾರ್ಮಿಕರು ಮತ್ತು ಯುವಜನರು ಮೋದಿ ಆಡಳಿತದಿಂದ ಬೇಸರವಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಮೋದಿ ಹೋದ ಕಡೆಯಲ್ಲೆಲ್ಲಾ ಸುಳ್ಳು ಭರವಸೆಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಜನರಿಗೆ ಚೆನ್ನಾಗಿ ಮನವರಿಕೆಯಾಗಿದೆ. ಜನರ ಪರಿಶ್ರಮದ ದುಡ್ಡು ವಂಚಕ ನೀರವ್ ಮೋದಿ ಜೇಬಿಗೆ ಸೇರಿದೆ ಎಂದು ರಾಹುಲ್ ಆರೋಪಿಸಿದರು.
ಕೃಷಿಕರು ಸಂಕಷ್ಟದಲ್ಲಿದ್ದಾರೆ. ರೈತರ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿಲ್ಲ. ಬದಲಿಗೆ ಕಾಪೆರ್Çರೇಟ್ ಸಂಸ್ಥೆಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ಕೃಷಿಕರ ಭೂಮಿಯನ್ನು ಕಸಿಯುವ ಕಾರ್ಯ ಮುಂದುವರಿಸಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿಲ್ಲ. ಗಬ್ಬರ್ ಸಿಂಗ್ ಟ್ಯಾಕ್ಸ್, ಮಹಿಳೆಯರ ಮೇಲೆ ಬಿಜೆಪಿ ಶಾಸಕರ ಅತ್ಯಾಚಾರ ಇವೇ ಮೋದಿ ಸರ್ಕಾರದ ಕೊಡುಗೆಗಳು ಎಂದು ರಾಹುಲ್ ಟೀಕಿಸಿದರು.
ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಳು ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಅವರು ವಿಶ್ವಾಸದಿಂದ ನುಡಿದರು.
ಚೀನಾದ ವುಹಾನ್ನಲ್ಲಿ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಭೇಟಿ ವೇಳೆ ಡೊಕ್ಲಾಂ ಗಡಿ ಬಿಕ್ಕಟ್ಟಿನ ಬಗ್ಗೆ ಮೋದಿ ಚಕಾರ ಎತ್ತಿಲ್ಲ. ಇವರೆಂಥ ಪ್ರಧಾನಿ ಎಂದು ರಾಹುಲ್ ಪ್ರಶ್ನಿಸಿದರು.