ಮೈಸೂರು, ಏ.29- ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ವರ್ಚಸ್ಸಿನಿಂದ ಹತಾಶರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ನಗರದ ಮೆಟ್ರೋಪೆÇೀಲ್ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹತಾಶರಾಗಿರುವ ಕಾಂಗ್ರೆಸ್ ನಾಯಕರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ನಾವು ಮುಸ್ಲಿಂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ ಎಂದ ಅವರು, ಯಾವುದೇ ಕಾರಣಕ್ಕೂ ಮುಸ್ಲಿಮರನ್ನು ನಾವು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಳ್ಳುವವರು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕಡೆಗಳಲ್ಲಿ ಏಕೆ ಸ್ಪರ್ಧಿಸಬೇಕಿತ್ತು ಎಂದು ಪ್ರಶ್ನಿಸಿದ ಅವರು, ನುಡಿದಂತೆ ಅವರು ನಡೆದಿದ್ದರೆ ಚಾಮುಂಡೇಶ್ವರಿ ಒಂದರಲ್ಲೇ ಸ್ಪರ್ಧಿಸಬಹುದಿತ್ತು. ಅವರು ನುಡಿದಂತೆ ನಡೆಯದೆ ಇರುವುದರಿಂದ ಎರಡು ಕಡೆಗಳಲ್ಲಿ ಸ್ಪರ್ಧಿಸುವ ಪರಿಸ್ಥಿತಿ ಬಂದಿದೆ ಎಂದರು.
ಅವರು ಮಾಡಿರುವ ತಪ್ಪುಗಳು ಒಂದೆರಡಲ್ಲ. ಅನ್ನಭಾಗ್ಯ, ಅಕ್ಕಿಭಾಗ್ಯ ಎಂದು ಒಂದರ ಹಿಂದೆ ಒಂದು ತಪ್ಪನ್ನು ಈ ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ ಎಂದ ಅವರು, 1983ರಲ್ಲಿ ಎಲ್ಲಿದ್ದರು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮೇಲೆತ್ತಿದವರು ಯಾರು ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಸಂಸ್ಥೆ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಅದನ್ನು ನಿಲ್ಲಿಸಿ ಎಸಿಬಿ ರಚಿಸಿದ್ದಾರೆ. ಎಸಿಬಿ ಇದುವರೆಗೂ ಏನು ಮಾಡಿದೆ ಎಂದು ಕಿಡಿಕಾರಿದರು.
ಅಹಿಂದವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಹಿಡಿಯಲು ಮುಂದಾಗಿದ್ದಾರೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರವೊಂದೆ ಪ್ರತಿಷ್ಠಿತ ಕ್ಷೇತ್ರವಲ್ಲ. ರಾಜ್ಯದಲ್ಲಿ ಎಲ್ಲವೂ ಪ್ರತಿಷ್ಠಿತ ಕ್ಷೇತ್ರಗಳೇ. ಆದರೆ, ಮಾಧ್ಯಮಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರವನ್ನು ಆ ರೀತಿ ಸೃಷ್ಟಿಸಲಾಗಿದೆ. ಅಲ್ಲಿನ ನಮ್ಮ ಅಭ್ಯರ್ಥಿ ಪ್ರಬಲರಾಗಿದ್ದಾರೆ ಎಂದು ಹೇಳಿದರು.
ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ ಒಬ್ಬರೇ ಸಾಕು. ಅವರು ಮರಿ ದೇವೇಗೌಡ ಇದ್ದ ಹಾಗೆ. ಅವರೊಬ್ಬರೇ ಸಾಕು ಎಲ್ಲರನ್ನು ಸೋಲಿಸಲು ಎಂದು ಟಾಂಗ್ ನೀಡಿದರು.
ನನ್ನ ಮತ್ತು ಸಿದ್ದರಾಮಯ್ಯ ನಡುವೆ ಸಾಮಾಜಿಕ ಸಂಬಂಧ ಉತ್ತಮವಾಗಿದೆ. ಆದರೆ, ನನ್ನ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧವೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಮರಿಗೌಡ ಧೈರ್ಯವಾಗಿ ಮಾತನಾಡಲು ಮತದಾರರಿಗೆ ಶಕ್ತಿ ಬಂದಿರುವುದೇ ಕಾರಣ. ಅವರು ಹಾಗೇ ಧೈರ್ಯವಾಗಿ ಮಾತನಾಡದೆ ಇದ್ದಿದ್ದರೆ ಮೇ 12ರ ನಂತರ ಸಿದ್ದರಾಮಯ್ಯ ಸಿಗುತ್ತಾರ ಎಂದು ಮರು ಪ್ರಶ್ನೆ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಟಿ.ದೇವೇಗೌಡ, ಚಾಮರಾಜನಗರ ಕ್ಷೇತ್ರದ ಕೆ.ಎಸ್.ರಂಗಪ್ಪ ಮತ್ತಿತರರಿದ್ದರು.