
ಬೆಳಗಾವಿ, ಏ.29-ಕುಮಾರಸ್ವಾಮಿ, ಅಮಿತ್ ಷಾ ಇಬ್ಬರೂ ಒಟ್ಟಿಗೇ ವಿಮಾನದಲ್ಲಿ ಹೋಗಿದ್ದಾರೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಇಬ್ಬರೂ ಒಟ್ಟಿಗೆ ಹೋಗಿದ್ದಾರೆ. ಸಮಯ ಬರಲಿ ಅಗತ್ಯ ದಾಖಲೆ ಬಿಡುಗಡೆ ಮಾಡೋಣ ಎಂದು ಹೇಳಿದರು.
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದ ಸಿಎಂ ಬೆಳಗಾವಿ ಜಿಲ್ಲೆಯಲ್ಲಿ 12 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಅಧಿಕಾರದ ಹಗಲು ಕನಸು ಕಾಣುತ್ತಾರೆ. ಸಿಎಂ ಆಗೋ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿ ಮಾಡಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಅವರು ಕಳಂಕಿತ ವ್ಯಕ್ತಿ. ರಾಜ್ಯದಲ್ಲಿ ಜನ ಅವರನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ, ರೆಡ್ಡಿ ಬ್ರದರ್ಸ್ ಒಟ್ಟಾಗಿದ್ದಾರೆ. ಈ ಲೂಟಿಕೋರರನ್ನು ಜನ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಬಿಎಸ್ವೈ ಸಿಎಂ ಆದರೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಜೈಲಿಗೆ ಹೋಗಿ ಬಂದಿದ್ದನ್ನು ಮೊದಲು ಹೇಳಲಿ. ಆಮೇಲೆ ನನ್ನ ವಿರುದ್ಧ ದಾಖಲೆ ಇದ್ದರೆ ಎಸಿಬಿ, ಲೋಕಾಯುಕ್ತಕ್ಕೆ ಕೊಡಲಿ ಎಂದು ಹೇಳಿದರು.
ಯಡಿಯೂರಪ್ಪಗೆ 75 ವರ್ಷ ವಯಸ್ಸಾಗಿದೆ. ಇನ್ನೂ ಅವರಿಗೆ ಭಾಷೆ ಬಳಸುವುದು ಗೊತ್ತಿಲ್ಲ. ಒಂದು ಸಂಸದೀಯ ಭಾಷೆ ಬಳಕೆ ಗೊತ್ತಿಲ್ಲ. ಏಕವಚನದಲ್ಲಿ ನನ್ನ ವಿರುದ್ಧ ಮಾತನಾಡುತ್ತಾರೆ. ಅಂತಹ ಭಾಷೆಯನ್ನು ನಾನು ಆಡುವುದಿಲ್ಲ. ಯಡಿಯೂರಪ್ಪನವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ಯಡಿಯೂರಪ್ಪ ಮೋಸ್ಟ್ ಕರಪ್ಟ್ ಮ್ಯಾನ್ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸುಟ್ಟ ಟ್ರಾನ್ಸ್ಫಾರ್ಮರ್ ಎಂಬ ಅಮಿತ್ ಷಾ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅವರು, ಅಮಿತ್ ಷಾ ಅವರು ಕಳಂಕಿತ ವ್ಯಕ್ತಿ. ಅಮಿತ್ಷಾ ಮಗ ಕರಪ್ಟ್. ಇವರು ಜೈಲಿಗೆ ಹೋದವರು ಎಂದು ತಿರುಗೇಟು ನೀಡಿದರು.
ಬಿಎಸ್ವೈ, ಕುಮಾರಸ್ವಾಮಿ ಅಧಿಕಾರಕ್ಕೆ ಬರುವುದಿಲ್ಲ. ಅದಕ್ಕೆ ಪ್ರಮಾಣವಚನಕ್ಕೆ ಮುಹೂರ್ತ ನಿಗದಿ ಮಾಡಿಕೊಂಡಿದ್ದಾರೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಅದಕ್ಕೆ ನಾವು ಸುಮ್ಮನಿದ್ದೇವೆ ಎಂದು ಹೇಳಿದರು.