ನೆಲಮಂಗಲ, ಏ.28-ಕಾಂಗ್ರೆಸ್ ದೇಶವನ್ನು ಹಾಳು ಮಾಡಿದ್ದು ಸಿದ್ದರಾಮಯ್ಯ ಕೂಡ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಪಟ್ಟಣದ ಐಟಿಐ ಕಾಲೇಜು ಆವರಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಎಟಿಎಂ ಮಾಡಿಕೊಂಡು ಜನರ ತೆರಿಗೆ ಹಣವನ್ನು ಲೂಟಿ ಮಾಡಿ ದೆಹಲಿಯ ನಾಯಕರನ್ನು ತೃಪ್ತಿ ಪಡಿಸುತ್ತಿರುವ ಸಿದ್ದರಾಮಯ್ಯವರನ್ನು ಮನೆಗೆ ಕಳುಹಿಸಬೇಕೆಂದು ಕರೆ ನೀಡಿದರು.
ರಾಜ್ಯಕ್ಕೆ ಬರುವ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಯಾರೋ ಬರೆದುಕೊಟ್ಟ ಭಾಷಣ ಓದಿ ಹೋಗುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಅವರು ರಾಜ್ಯಕ್ಕೆ ಬಂದಷ್ಟೂ ಬಿಜೆಪಿಗೇ ಲಾಭವಾಗಲಿದೆ. ನೆಲಮಂಗಲಕ್ಕೆ ಮೆಟ್ರೋ ರೈಲನ್ನು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ 7 ದಿನಗಳೊಳಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ಅನುಮೋದನೆ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕಳೆದ 60 ವರ್ಷದಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆ, ಹೇಮಾವತಿ ನಾಲೆಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ .ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ಕಾಂಗ್ರೆಸ್ ಪಕ್ಷದ ಲೂಟಿಕೋರರನ್ನು ರಕ್ಷಿಸಲು ಪ್ರಾರಂಭವಾದ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತ ಬಲಗೊಳಿಸುವ ಕಾರ್ಯಕ್ಕೆ ಮುಂದಾಗುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್, ಅರಿಶಿನಕುಂಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಂಜನಾಮೂರ್ತಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಅಭ್ಯರ್ಥಿ ಎಂ.ವಿ.ನಾಗರಾಜ್, ಒಬಿಸಿ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ನಿವೃತ್ತ ಜಿಲ್ಲಾಧಿಕಾರಿ ಡಾ.ಸೋಮಶೇಖರ್, ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಲೋಕೇಶ್, ಜಿ.ಪಂ. ಸದಸ್ಯ ನಂಜುಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.
ನಾಮಪತ್ರ ವಾಪಸ್: ಬಿಜೆಪಿ ಎಸ್ಸಿ ಮೋಚಾ ಜಿಲ್ಲಾಧ್ಯಕ್ಷ ಬಿ.ಹೊಂಬಯ್ಯ ಅವರು ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ವರಿಷ್ಠರ ಸೂಚನೆ ಹಾಗೂ ಮಧ್ಯಸ್ಥಿಕೆಯಿಂದ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.