ಹಿರಿಯ ವಕೀಲೆ ಮಲ್ಹೋತ್ರಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ

ನವದೆಹಲಿ, ಏ.27-ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಇಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇರ ನೇಮಕಗೊಂಡ ಪ್ರಥಮ ಮಹಿಳಾ ನ್ಯಾಯವಾದಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಇಂದೂ ಮಲ್ಹೋತ್ರಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸ್ವಾತಂತ್ರ್ಯ ಬಂದಾಗಿನಿಂದ ಸರ್ವೋನ್ನತ ನ್ಯಾಯಾಲಯಕ್ಕೆ ನೇಮಕಗೊಂಡ ಏಳನೇ ಮಹಿಳೆ ಇವರಾಗಿದ್ದಾರೆ. ಇವರ ಸೇರ್ಪಡೆಯಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 25ಕ್ಕೆ ಏರಿದೆ.
ಹಿರಿಯ ವಕೀಲರಾದ ಇಂದೂ ಸೇರಿದಂತೆ ಇಬ್ಬರ ಹೆಸರನ್ನು ನ್ಯಾಯಾಧೀಶರ ನೇಮಕಕ್ಕಾಗಿ ನ್ಯಾಯಮೂರ್ತಿಗಳ ಸಮೂಹ-ಕೊಲಿಜಿಯಂ ಶಿಫಾರಸು ಮಾಡಿತ್ತು.
ಉತ್ತರಖಂಡ್ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ಬಡ್ತಿಗೆ ಸರ್ಕಾರ ತಿರಸ್ಕರಿಸಿದ ವಿವಾದ ಬೆನ್ನಲ್ಲೇ ಇಂದೂ ಮಲ್ಹೋತ್ರಾ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯಕ್ಕೆ ಹಿರಿಯ ವಕೀಲರಾಗಿ ನೇಮಕಗೊಂಡ ಎರಡನೇ ಮಹಿಳೆ ಇವರಾಗಿದ್ದಾರೆ. 2007ರಲ್ಲಿ 30 ವರ್ಷಗಳ ಬಳಿಕ ಸೀನಿಯರ್ ಅಡ್ವೋಕೇಟ್ ಆಗಿ ನೇಮಕಗೊಂಡಿದ್ದಾರೆ.
ಫಾತೀಮಾ ಬೀವಿ ಸರ್ವೋಚ್ಚ ನ್ಯಾಯಾಲಯದ ಪ್ರಥಮ ಮಹಿಳಾ ನ್ಯಾಯಾಧೀಶರಾಗಿದ್ದರು. 1950ರಲ್ಲಿ ಸುಪ್ರೀಂಕೋರ್ಟ್ ಅಸ್ವಿತ್ವಕ್ಕೆ ಬಂದ 39 ವರ್ಷಗಳ ಬಳಿಕ 1989ರಲ್ಲಿ ಅವರು ನೇಮಕವಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ