ನವದೆಹಲಿ, ಏ.27-ಪಾಕಿಸ್ತಾನದ ಜೆಎಫ್-17 ಪ್ರಸ್ತುತ ಯುದ್ಧ ವಿಮಾನವಾದರೆ, ಭಾರತದ ದೇಶೀಯ ನಿರ್ಮಿತ ತೇಜಸ್ ಭವಿಷ್ಯದ ಫೈಟರ್ ಜೆಟ್ ಆಗಿದೆ ಎಂದು ವಾಯು ಪಡೆ(ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕುರಿತು ವಿಮಾನಗಳ ನಿಯತಕಾಲಿಕವೊಂದರಲ್ಲಿ ಉತ್ತಮ ಲೇಖನ ಪ್ರಕಟವಾಗಿದೆ. ಅದರಲ್ಲಿ ಲೇಖಕರು ಪಾಕ್ನ ಜೆಎಫ್-17 ಮತ್ತು ಭಾರತದ ತೇಜಸ್ ವಿಮಾನದ ಬಗ್ಗೆ ತುಲನಾತ್ಮಕ ವಿಶ್ಲೇಷಣೆ ಮಾಡಿದ್ದಾರೆ. ಜೆಎಫ್-17 ಯುದ್ಧ ವಿಮಾನವು ತೇಜಸ್ ಜೆಟ್ನಷ್ಟು ತಾಂತ್ರಿಕವಾಗಿ ಮುಂದುವರಿದಿಲ್ಲ ಎಂದು ಹೇಳಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು.
ಪಾಕ್ನ ಜೆಎಫ್-17 ಪ್ರಸ್ತುತ ಯುದ್ಧ ವಿಮಾನವಾದರೆ, ಭಾರತದ ತೇಜಸ್ ಭವಿಷ್ಯದ ಫೈಟರ್ ಜೆಟ್ ಎಂದು ನಿಸ್ಸಂದೇಹವಾಗಿ ಹೇಳಬಹುದು ಎಂದು ಏರ್ ಚೀಫ್ ಮಾರ್ಷಲ್ ವಿಶ್ವಾಸದಿಂದ ನುಡಿದರು.
ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಹಗುರ, ಏಕ ಎಂಜಿನ್ ಮತ್ತು ಬಹು ಪಾತ್ರ ನಿರ್ವಹಿಸಬಲ್ಲ ಯುದ್ಧ ವಿಮಾನ ಜೆಎಫ್-17 ಅಭಿವೃದ್ದಿಗೊಳಿಸಿದ್ದರೆ, ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಸಂಸ್ಥೆಯಿಂದ ತೇಜಸ್ ಹಗುರ ಪೈಟರ್ ಜೆಟ್ನನ್ನು ನಿರ್ಮಿಸಲಾಗಿದೆ.