ಚೆನ್ನೈ, ಏ.27-ಅವಧಿಗೆ ಮುನ್ನವೇ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬಳಾದ ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು ತಳ್ಳಿ ಹಾಕಿದೆ. ಇದರಿಂದಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಸೆರೆವಾಸ ಮುಂದುವರಿದಂತಾಗಿದೆ.
ನ್ಯಾಯಮೂರ್ತಿಗಳಾದ ಕೆ.ಕೆ.ಶಶಿಧರನ್ ಮತ್ತು ಆರ್.ಸುಬ್ರಮಣ್ಯನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ವಿಧಿ 161ರ ಅಡಿ (ಕ್ಷಮಾಧಾನ ನೀಡುವ ರಾಜ್ಯಪಾಲರ ಅಧಿಕಾರ) ರಾಜ್ಯ ಸರ್ಕಾರದ 1994ರ ಯೋಜನೆ ಅಡಿ ತನ್ನನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಬೇಕೆಂದು ಕೋರಿ ನಳಿನಿ ಪರ ವಕೀಲ ರಾಧಾಕೃಷ್ಣನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಏಕ ನ್ಯಾಯಾಧೀಶರ ಪೀಠ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ನಳಿನಿ ಮೇಲ್ಮನವಿ ಸಲ್ಲಿಸಿದ್ದಳು. ಈ ಪ್ರಕರಣದ ಕುರಿತು ಕೂಲಂಕಷ ವಿಚಾರಣೆ ನಡೆಸಿದ್ದ ಪೀಠವು ಏಪ್ರಿಲ್ 24ರಂದು ಆದೇಶ ಕಾದಿರಿಸಿ, ಇಂದು ತೀರ್ಪು ನೀಡುವುದಾಗಿ ತಿಳಿಸಿತ್ತು.
ಏಕ ನ್ಯಾಯಾಧೀಶರ ತೀರ್ಪನ್ನು ಎತ್ತಿ ಹಿಡಿದ ಪೀಠವು, ಸುಪ್ರೀಂಕೋರ್ಟ್ ಮುಂದೆ ಬಾಕಿ ಇರುವ ಪ್ರಕರಣ ಇತ್ಯರ್ಥವಾಗುವ ತನಕ ಅಪರಾಧಿ ಕಾಯಬೇಕಾಗುತ್ತದೆ ಎಂಬ ಕಾರಣ ನೀಡಿ ಅರ್ಜಿ ವಜಾಗೊಳಿಸಿದೆ.