ಬೆಂಗಳೂರು, ಏ.27-ರಾಜ್ಯ ವಿಧಾನಸಭೆ ಚುನಾವಣೆಗೆ ದಿನ ಎಣಿಕೆ ಆರಂಭವಾಗಿದ್ದು, ಪ್ರಚಾರ ರಂಗೇರುತ್ತಿದೆ. ಇದೇ ವೇಳೆ ಮತದಾರರನ್ನು ಓಲೈಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಗೆಬಗೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಿಗಾದ ನಡುವೆಯೂ ಒಂದೆಡೆ ಮತದಾರರನ್ನು ಸೆಳೆಯಲು ಹಣ ಹಂಚುತ್ತಿರುವ ಪ್ರಕರಣಗಳು ವರದಿಯಾಗಿದ್ದರೆ, ಮತ್ತೊಂದೆಡೆ ಆನ್ಲೈನ್ ಮೂಲಕ ದುಡ್ಡು ವಿತರಿಸುವ ತಂತ್ರವನ್ನು ಅಭ್ಯರ್ಥಿಗಳು ಕಂಡುಕೊಂಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವuಯಲ್ಲಿ ಈ ಬಾರಿ ಡಿಜಿಟಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ಇದಕ್ಕೂ ದುರುಪಯೋಗ ಮಾಡಿಕೊಂಡಿರುವ ಕೆಲವು ಅಭ್ಯರ್ಥಿಗಳು ನಿರ್ದಿಷ್ಟ ಮತದಾರರ ಜನ್ಧನ್ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾಯಿಸುವ ಪರ್ಯಾಯ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಆ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ವೀಕ್ಷಕರ ಬಲೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿರುವ ಅಂಶ ಬೆಳಕಿಗೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಣದಲ್ಲಿರುವ ಅಭ್ಯರ್ಥಿಗಳ ನಂಬಿಕೆಗೆ ಅರ್ಹರಾದ ವ್ಯಕ್ತಿಗಳು ಮತದಾರರ ಬ್ಯಾಂಕ್ ಖಾತೆಗಳು ಮತ್ತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ನಂತರ ಅವರಿಂದ ನಿರ್ದಿಷ್ಟ ಹುರಿಯಾಳು ಪರವಾಗಿ ಮತ ಚಲಾವಣೆ ಮಾಡಲು ಪ್ರಮಾಣ ಮಾಡಿಸಿಕೊಂಡು ಅವರ ಖಾತೆಗೆ 2,000 ರೂ.ಗಳನ್ನು ವರ್ಗಾಯಿಸುವುದಾಗಿ ಆಮಿಷವೊಡ್ಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಮುಂಗಡವಾಗಿ 1,000 ರೂ.ಗಳನ್ನು ಖಾತೆಗೆ ವರ್ಗಾಯಿಸಲಾಗಿದ್ದು, ಮೇ 12ರ ಮತದಾನದ ಬಳಿಕ ಉಳಿದ ಹಣವನ್ನು ಜಮಾ ಮಾಡುವುದಾಗಿ ತಿಳಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುವುದರಿಂದ ಹಾಗೂ ಆಯೋಗದ ವೀಕ್ಷಕರು ನಿಗಾ ವಹಿಸಿರುವುದರಿಂದ ಅಭ್ಯರ್ಥಿಗಳು ತಮ್ಮ ಖಾತೆ ಮೂಲಕ ಮತದಾರರಿಗೆ ಹಣ ವರ್ಗಾವಣೆ ಮಾಡುತ್ತಿಲ್ಲ. ಬದಲಿಗೆ ತಮ್ಮ ನಂಬಿಕಸ್ಥರು, ವಿಶ್ವಾಸಾರ್ಹ ಕಾರ್ಯಕರ್ತರು ಹಾಗೂ ಸ್ಥಳೀಯ ಉದ್ಯಮಿಗಳ ಮೂಲಕ ಮನಿ ಟ್ರಾನ್ಸ್ಫರ್ ಮಾಡಿಸುತ್ತಿದ್ದಾರೆ. ಈ ಮೂಲಕ ಯಾವುದೇ ಗುಮಾನಿ ಬರದಂತೆ ಮುನ್ನೆಚ್ಚರಿಕೆ ವಹಿಸಿ ಮತದಾರರಿಗೆ ಆನ್ಲೈನ್ ಮೂಲಕ ಹಣ ಹಂಚಲಾಗುತ್ತಿದೆ ಎಂಬ ಸಂಗತಿ ಬಯಲಾಗಿದೆ.
ಆದಾಯ ತೆರಿಗೆ ಇಲಾSಯ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಹಾದಿ ತಪ್ಪಿಸುವ ಕುತಂತ್ರದ ವಾಮ ಮಾರ್ಗ ಇದಾಗಿದೆ. ಪ್ರತಿ ಮತದಾರ ಖಾತೆಗೆ ಒಂದೆರಡು ಸಾವಿರ ರೂ.ಗಳು ವರ್ಗಾವಣೆಯಾದರೆ ಬ್ಯಾಂಕ್ ಸಿಬ್ಬಂದಿಗಾಗಲಿ ಅಥವಾ ವಹಿವಾಟಿನ ಮೇಲೆ ಕಣ್ಣಿಟ್ಟಿರುವ ವಿಶೇಷ ಸಿಬ್ಬಂದಿಗಾಗಲಿ ಇದು ಗಮನಕ್ಕೆ ಬರುವುದಿಲ್ಲ. ಮತ್ತು ಈ ಜಾಡು ಪತ್ತೆ ಮಾಡುವುದು ಅಸಾಧ್ಯ ಎಂಬ ಲೆಕ್ಕಾಚಾರ ಈ ಅಭ್ಯರ್ಥಿಗಳದ್ದು.
ಈ ನೇರ ನಗದು ವರ್ಗಾವಣೆ ತಂತ್ರವು ಅಭ್ಯರ್ಥಿಗಳ ಪರ ಮತವನ್ನೂ ಖಚಿತಪಡಿಸುವುದಲ್ಲದೇ, ಮತದಾರರು ತಮ್ಮ ಹಕ್ಕುಗಳ ಚಲಾವಣೆ ಬದ್ಧvಯನ್ನೂ ದೃಢಪಡಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಈಗಾಗಲೇ ಕೆಲವು ಶ್ರಮಿಕ ವರ್ಗದವರ ಖಾತೆಗೆ 1,000 ರೂ.ಗಳು ಜಮೆಯಾಗಿದೆ. ಮತದಾರರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದಿರುವ ಉಮೇದುವಾರರ ಪರ ಕಾರ್ಯಕರ್ತರು ಜನ್ಧನ್ ಮತ್ತು ಅವರ ವೈಯಕ್ತಿಕ ಖಾತೆಗಳಿಗೆ ಹಣ ಜಮಾವಣೆ ಮಾಡುವ ಕಾರ್ಯ ಆರಂಭಿಸಿದ್ದಾರೆ. ಮ£ಯಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಇಂಥ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿಯೊಬ್ಬರು, ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ವಹಿಸಿದ್ದೇವೆ. ಆದರೆ ಮೊಬೈಲ್ ಆ್ಯಪ್ ಮೂಲಕ ಪಾವತಿಯಾಗುವ ಇಂಥ ಹಣದ ಬಗ್ಗೆ ಗಮನಹರಿಸುವುದು ಕಷ್ಟ ಎಂದು ತಿಳಿಸಿದ್ದಾರೆ.