
ಬೆಂಗಳೂರು,ಏ.27-ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಸಂಪಂಗಿ ರಾಮನಗರ ವಾರ್ಡ್ನ ಬಿಬಿಎಂಪಿ ಮಾಜಿ ಸದಸ್ಯ ಎಂ.ಗೋಪಿ ಅವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲು ತೀರ್ಮಾನಿಸಿದ್ದಾರೆ.
ಶಿವಾಜಿನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಗೋಪಿ ಅವರ ಬದಲಿಗೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಟಿಕೆಟ್ ನೀಡಿರುವುದರಿಂದ ಪಕ್ಷ ತೊgಯಲು ತೀರ್ಮಾನಿಸಿ ಬೆಂಗಳೂರು ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಅವರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ರಾಜ್ಯದಲ್ಲಿ 70 ಲಕ್ಷದಷ್ಟಿರುವ ನೇಕಾರರಿಗೆ ಜನಸಂಖ್ಯೆ ಅನುಗುಣವಾಗಿ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನೇಕಾರ ಸಮುದಾಯದ ಶ್ರೀ ದಯಾನಂದಪುರಿ ಸ್ವಾಮೀಜಿಗಳಿಗೆ ಭರವಸೆ ನೀಡಿದ್ದರು.
ಕೊಟ್ಟ ಮಾತಿನಂತೆ ಶಿವಾಜಿನಗರ, ಚಾಮರಾಜಪೇಟೆ, ಗಾಂಧಿನಗರ ಹಾಗೂ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರಗಳಲ್ಲಿ ನೇಕಾರ ಸಮುದಾಯದ ಮುಖಂಡರಿಗೆ ಆದ್ಯತೆ ನೀಡಬೇಕಿತ್ತು. ಆದರೆ ಕೊಟ್ಟ ಮಾತು ತಪ್ಪಿರುವ ಬಿ.ಎಸ್.ಯಡಿಯೂರಪ್ಪ ಅವರು ಯಾವೊಬ್ಬ ನೇಕಾರ ಮುಖಂಡರಿಗೂ ಟಿಕೆಟ್ ನೀಡದಿರುವುದರಿಂದ ಮನನೊಂದು ಬಿಜೆಪಿ ತ್ಯಜಿಸಲು ತೀರ್ಮಾನಿಸಿರುವುದಾಗಿ ಗೋಪಿ ತಿಳಿಸಿದ್ದಾರೆ.