ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ನೋಟಾ ಅಭಿಯಾನ:

ಮೈಸೂರು,ಏ.26-ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ನೋಟಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಬಿಜೆಪಿ ಹೆಸರಿನಲ್ಲಿ ಕರ ಪತ್ರವೊಂದನ್ನು ಹೊರಡಿಸಲಾಗಿದ್ದು ನೊಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಂದ ಎಂದು ಅದರಲ್ಲಿ ನಮೂದಿಸಲಾಗಿದೆ.
ಬಿಜೆಪಿ ಚಿಹ್ನೆಯಾದ ಕಮಲವನ್ನು ಕರಪತ್ರದಲ್ಲಿ ತಲೆಕೆಳಗಾಗಿ ಮುದ್ರಿಸಲಾಗಿದ್ದು , ಅದರ ಮೇಲೆ ಆರು ಪ್ಯಾರಾಗಳಷ್ಟು ಮಾಹಿತಿಗಳನ್ನು ಹಾಕಲಾಗಿದ್ದು, ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾ ಅಭಿಯಾನವೆಂದು ಹಾಕಲಾಗಿದೆ.
ನಮಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸುವ ಸ್ವಾತಂತ್ರ್ಯವನ್ನು ಮತದಾನದ ಮೂಲಕ ನಮಗೆ ಉಳಿಸಿಕೊಳ್ಳುವುದು, ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಮಣ್ಣುಪಾಲು ಮಾಡಿದ ಅನಂತಕುಮಾರ್ ಹಾಗೂ ಸಂತೋಷ್ ಇವರ ಗರ್ವಭಂಗಕ್ಕೆ ನೋಟಾ ಚಲಾವಣೆ ಅನಿವಾರ್ಯ ಎಂದು ಹೇಳಲಾಗಿದೆ.
ಈ ಮೂಲಕ ಅತಿಹೆಚ್ಚು ನೋಟಾ ಮತದಾನವಾಗಿ ಮರುಚುನಾವಣೆ ನಡೆಯಲಿ ಎಂಬುದೇ ನಮ್ಮ ಅಭಿಲಾಷೆ. ಮಿ. ಅನಂತಕುಮಾರ ಹಾಗೂ ಸಂತೋಷ್ ಇವರಿಬ್ಬರಿಗೆ ಈ ಮೂಲಕ ತಿಳಿಯಲಿಚ್ಛಿಸುವುದೇನೆಂದರೆ ವಿಜಯೇಂದ್ರ ನಾಮಪತ್ರ ಸಲ್ಲಿಸಲು ಬಂದಾಗ 40-50 ಸಾವಿರ ಜನರಿದ್ದರು.
ನಿಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಬಂದಾಗ ಕೇವಲ ಆರು ಜನರಿದ್ದರು.ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಗನ ಗೆಲುವಿಗೆ ನೀವು ನೀಡುತ್ತಿರುವ ಕೊಡುಗೆಯೇ ಅಥವಾ ಮುಂದೊಂದು ದಿನ ಯಡಿಯೂರಪ್ಪ ಅವರನ್ನು ಬಿಟ್ಟರೆ ಈ ರಾಜ್ಯದ ಯುವ ನಾಯಕನಾಗಿ ಬೆಳೆಯುತ್ತಾನೆ ಎಂಬ ಅವ್ಯಕ್ತ ಭಯವೇ ಎಂದು ಪ್ರಶ್ನಿಸುವ ವಾಖ್ಯ ಮುದ್ರಿಸಲಾಗಿದೆ.
ಇದಕ್ಕೆ ನೀವು ಎಷ್ಟು ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಲಾಗಿದೆ.
ನೋಟಾ ಅಭಿಯಾನದಲ್ಲಿ ಈ ರೀತಿಯ ಪ್ರಶ್ನೆ ಹಾಗೂ ವಿಷಯಗಳನ್ನು ಒಳಗೊಂಡ ಕರಪತ್ರಗಳನ್ನು ಮುದ್ರಿಸಿ ಎಲ್ಲೆಡೆ ಹಂಚಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ