ಔರಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಪ್ರಚಾರ ಪ್ರಭು ಚವ್ಹಾಣ್ ಮತಯಾಚನೆ

ಬೀದರ್, ಏ. 26- ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಶಾಸಕ ಪ್ರಭು ಚವ್ಹಾಣ್ ಪ್ರಚಾರಕ್ಕೆ ಚಾಲನೆ ನೀಡಿದ್ದು, ಗುರುವಾರ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಕ್ಷೇತ್ರದ ನಾಗಮಾರಪಳ್ಳಿ, ಸೋನಾಳ, ಸೋರಳ್ಳಿ, ವಲ್ಲೇಪುರ, ಜಂಬಕಿ, ಚಿಕ್ಲಿ (ಜೆ), ಕರಂಜಿ (ಕೆ), ಕರಂಜಿ (ಬಿ), ಲಿಂಗದಳ್ಳಿ, ವಡಗಾಂವ, ಗುಡಪಳ್ಳಿ, ಮಡಪರ್ಳಳಿ, ಚಿಂತಾಕಿ ಸೇರಿ ಗ್ರಾಮಗಳಿಗೆ ಶಾಸಕ ಪ್ರಭು ಚವ್ಹಾಣ್ ಭೇಟಿ ನೀಡಿ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಚವ್ಹಾಣ್, ಕಳೆದ ಎರಡು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ. ಪ್ರತಿಯೊಂದು ಗ್ರಾಮಕ್ಕೆ ರಸ್ತೆ, ನೀರು ಸೇರಿ ಮೂಲಭೂತ ಸೌಲಭ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಿರುವೆ. ಈ ಬಾರಿ ಬಿಜೆಪಿಗೆ ಬೆಂಬಲಿಸುವ ಮೂಲಕ ಹ್ಯಾಟ್ರಿಕ್ ಗೆಲುವು ನೀಡಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಚಾಲನೆ ಸಿಕ್ಕಿದ್ದು, ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಮೂಲಕ ಇದು ಸಾಕಾರಗೊಳ್ಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದ್ದು, ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಉತ್ತಮ ವಾತಾವರಣ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬೆಂಬಲಿಸಬೇಕು. ಬರುವ ದಿನಗಳಲ್ಲಿ ರಾಜ್ಯ, ರಾಷ್ಟ್ರ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಅನೀಲ ಗುಂಡಪ್ಪ, ವಸಂತ ಬಿರಾದಾರ, ಸತೀಶ್ ಪಾಟೀಲ್, ರಮೇಶ ದೇವಕತ್ತೆ, ಸಚಿನ್ ರಾಠೋಡ್, ಶೇಷರಾವ ಕೋಳಿ, ಸಂಜುಕುಮಾರ, ಜಗನ್ನಾಥ, ಮಧುಕರ, ಕೊಂಡಿಬಾ ಬಿರಾದಾರ ಇತರರಿದ್ದರು.
==========================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ