ಬೆಂಗಳೂರು, ಏ.26-ರಾಜ್ಯ ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ವಾಪಸ್ ಪಡೆಯಲು ನಾಳೆ ಕಡೇ ದಿನವಾಗಿದೆ. ಹಲವು ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಮನವೊಲಿಸುವ ಪ್ರಯತ್ನವನ್ನು ಆಯಾ ರಾಜಕೀಯ ಪಕ್ಷಗಳ ನಾಯಕರು ಮುಂದುವರೆಸಿದ್ದಾರೆ.
ನಾಳೆ ಸಂಜೆ ನಂತರ ಚುನಾವಣಾ ಕಣದಲ್ಲಿ ಉಳಿಯುವ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಟಿಕೆಟ್ ವಂಚಿತ ಅತೃಪ್ತರು ಹಾಗೂ ಬಂಡಾಯವೆದ್ದು ಸ್ಪರ್ಧೆಗಿಳಿದಿರುವವರ ಮನವೊಲಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವಾಗಿ ಉಮೇದುವಾರಿಕೆ ಸಲ್ಲಿಸಿರುವ ಸ್ಪರ್ಧಾಕಾಂಕ್ಷಿಗಳ ಮನವೊಲಿಸುವ ಕೊನೆಯ ಪ್ರಯತ್ನ ಮಾಡಲಾಗುತ್ತಿದೆ. ಬಂಡಾಯಗಾರರು ಕೊನೆಗೂ ಮಣಿಯದಿದ್ದರೆ ಆಯಾ ಪಕ್ಷಗಳು ಅನಿವಾರ್ಯವಾಗಿ ಶಿಸ್ತು ಕ್ರಮವನ್ನು ಕೈಗೊಳ್ಳಲಿವೆ.
ಅಧಿಕೃತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡು ಗೆಲುವಿಗಾಗಿ ನಾನಾ ರೀತಿಯ ತಂತ್ರ-ಪ್ರತಿತಂತ್ರಗಳನ್ನು ರೂಪಿಸಲಿವೆ.
ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ಹಾಗೂ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿದ್ದು, ಮತಯಾಚನೆ ಮಾಡತೊಡಗಿದ್ದಾರೆ.
ಏ.17 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿತ್ತು. ನಾಮಪತ್ರಗಳ ಪರಿಶೀಲನೆ ನಿನ್ನೆ ನಡೆದಿದ್ದು, ಇಂದು ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರಗಳ ಬಗ್ಗೆ ಚುನಾವಣಾಧಿಕಾರಿಗಳ ನಿರ್ಧಾರ ಪ್ರಕಟವಾಗಲಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,374 ನಾಮಪತ್ರಗಳು ಸಲ್ಲಿಕೆಯಾಗಿದ್ದು, 3,115 ಪುರುಷರು ಹಾಗೂ 259 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 1673 ಮಂದಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ 282, ಕಾಂಗ್ರೆಸ್ನಿಂದ 250, ಜೆಡಿಎಸ್ನಿಂದ 231, ಬಿಎಸ್ಪಿಯಿಂದ 22, ಎನ್ಸಿಪಿಯಿಂದ 15, ಸಿಪಿಐನಿಂದ 3, ಸಿಪಿಐ(ಎಂ)ಯಿಂದ 2 ನಾಮಪತ್ರಗಳು ಸಲ್ಲಿಕೆಯಾಗಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.
ಮೇ 12 ರಂದು ಮತದಾನ ನಡೆಯಲಿದ್ದು, ಮೇ 15 ರಂದು ಮತಗಳ ಎಣಿಕೆ ಅಂದೇ ಫಲಿತಾಂಶ ಹೊರಬೀಳಲಿದೆ.