
ಮಳವಳ್ಳಿ, ಏ.26- ಇಂದು ಬೆಳ್ಳಂ ಬೆಳಗ್ಗೆಯೇ ಅರಣ್ಯ ಇಲಾಖೆ ನೌಕರನ ಮೇಲೆ ಆನೆ ದಾಳಿ ನಡೆಸಿದ್ದು , ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಲಗೂರು ಹೋಬಳಿಯ ಮರಿಗೌಡನ ದೊಡ್ಡಿ ನಿವಾಸಿ ಮಹದೇವ್ (35) ಮೃತಪಟ್ಟ ನೌಕರ.
ಇಂದು ಬೆಳಗ್ಗೆ ಸೊಲಬ ಗ್ರಾಮಕ್ಕೆ ಕಾಡಾನೆಯೊಂದು ಬಂದಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಮಹದೇವ್ ಸೇರಿದಂತೆ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಯು ಆನೆಯನ್ನು ಕಾಡಿಗಟ್ಟಲು ತೆರಳಿದ್ದಾರೆ.
ಈ ವೇಳೆ ಆನೆಯು ಮಹದೇವ ಅವರ ಮೇಲೆ ದಾಳಿ ನಡೆಸಿದ್ದು , ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೃತನಿಗೆ ಇಬ್ಬರು ಸಣ್ಣ ಮಕ್ಕಳಿದ್ದು , ಆಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಮಂಜುನಾಥ್ ಮಾತನಾಡಿ, ಸರ್ಕಾರದಿಂದ ನೀಡಬೇಕಾಗಿರುವ ಪರಿಹಾರ ಧನವನ್ನು ಶೀಘ್ರವಾಗಿ ಕೊಡಿಸುವುದಾಗಿ ಹೇಳಿದರು.