ಅತ್ಯಾಚಾರಕ್ಕೆ ಒಳಗಾದವರ ಗುರುತು ಬಹಿರಂಗಗೊಳಿಸಬಾರದು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್!

ನವದೆಹಲಿ, ಏ.25-ಅತ್ಯಾಚಾರಕ್ಕೆ ಒಳಗಾದವರ ಗುರುತು ಬಹಿರಂಗಗೊಳಿಸಬಾರದು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, ಸಂತ್ರಸ್ತೆ ಮೃತಪಟ್ಟಿದ್ದರೂ ಅವರಿಗೆ ಅವರದೇ ಆದ ಘನತೆ-ಗೌರವ ಇರುತ್ತದೆ. ಅದಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಗುರುತು ಬಹಿರಂಗಗೊಳಿಸಿದ ಪ್ರಕರಣದ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರು ಎಲ್ಲರೂ ಒಂದೇ ರೀತಿಯವರಾಗಿರುತ್ತಾರೆ. ಸಂತ್ರಸ್ತರು ಮರಣ ಹೊಂದಿದ್ದಾರೆ ಅಥವಾ ಅಪ್ರಾಪ್ತೆ ಎಂಬ ಮಾಹಿತಿಯನ್ನು ಸಹ ಬಹಿರಂಗಗೊಳಿಸಬಾರದು. ಅದೇ ರೀತಿ ಸಂತ್ರಸ್ತೆಯ ಕುಟುಂಬಕ್ಕೆ ಪ್ರತಿಭಟನೆಯ ಧ್ವನಿ ಇಲ್ಲ ಎಂಬ ಕಾರಣಕ್ಕಾಗಿ ಗುರುತು ಬಹಿರಂಗಗೊಳಿಸುವುದು ಕೂಡ ಅಪರಾಧ ಎಂದು ಕೋರ್ಟ್ ಹೇಳಿದೆ.
ಮಾಧ್ಯಮಗಳು(ಮುದ್ರಣ ಮತ್ತು ವಿದ್ಯುನ್ಮಾನ) ಸಂತ್ರಸ್ತರ ಹೆಸರು ಮತ್ತು ಇತರ ಮಾಹಿತಿ ತಿಳಿಸದೇ ವರದಿ ಮಾಡಬಹುದು. ಮಾಹಿತಿ ಬಹಿರಂಗಗೊಳಿಸುವುದರಿಂದ ಸಂತ್ರಸ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಅತೀವ ಮುಜುಗರವಾಗುತ್ತದೆ. ಸಮಾಜದಲ್ಲಿ ಬದುಕುವುದು ಕಷ್ಟವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ