ನವದೆಹಲಿ, ಏ.25-ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗಬಹುದಾದ ಸವಾಲುಗಳನ್ನು ಹಿಮ್ಮೆಟ್ಟಿಸುವ ಭಾರತೀಯ ವಾಯು ಪಡೆ (ಐಎಎಫ್) ಕೈಗೊಂಡ 13 ದಿನಗಳ ಬೃಹತ್ ವಾಯು ಸೇನಾಭ್ಯಾಸ-ಗಗನಶಕ್ತಿ ನಿನ್ನೆ ಮುಕ್ತಾಯಗೊಂಡಿದೆ. ಕಳೆದ ಮೂರು ದಶಕಗಳಲ್ಲೇ ಅತ್ಯಂತ ದೊಡ್ಡ ವಾಯು ಸಮರಾಭ್ಯಾಸ ಇದಾಗಿದ್ದು, ಭಾರತದ ಅಗಾಧ ಸಾಮಥ್ರ್ಯದ ಅನಾವರಣವಾಗಿದೆ.
ಗಗನಶಕ್ತಿ-ಏರ್ ಡ್ರಿಲ್‍ನಲ್ಲಿ ಯುದ್ಧ ವಿಮಾನಗಳು ತಮ್ಮ ಶಕ್ತಿ ಸಾಮಥ್ರ್ಯ ಪ್ರದರ್ಶಸಿದ್ದು, ಪಾಕಿಸ್ತಾನ ಮತ್ತು ಚೀನಾಗೆ ಒಳಗೊಳಗೆ ನಡುಕ ಹುಟ್ಟಿಸಿದೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ರಾಸಾಯನಿಕ, ಜೈವಿಕ, ಮತ್ತು ಅಣ್ವಸ್ತ್ರಗಳ ದಾಳಿಗಳನ್ನು ನಡೆಸುವುದಕ್ಕೂ ಭಾರತ ಶತಸಿದ್ಧ ಎಂಬುದನ್ನು ಗಗನಶಕ್ತಿ ಸಾಬೀತು ಮಾಡಿದೆ.
ಸುಕೋಯ್-30ಎಂಕಿಐಗಳು, ಮಿರೇಜ್-2000, ಜಾಗ್ವಾರ್, ಮಿಗ್-29, ಮಿಗ್-27. ತೇಜಸ್, ಮತ್ತು ಹಾಕ್ ವಿಮಾನಗಳೂ ಸೇರಿದಂತೆ ಇತರೆ ಸಮರ ವಿಮಾನಗಳು ಸಮರಾಭ್ಯಾಸದಲ್ಲಿ ಭಾಗವಹಿಸಿದವು.
ಗಗನಶಕ್ತಿ-2018 ಅದ್ಭುತ ಯಶಸ್ಸು ಸಾಧಿಸಿದೆ. ಈ ಸಮರಾಭ್ಯಾಸ ನಿರೀಕ್ಷೆಗೂ ಮೀರಿದ ಉದ್ದೇಶವನ್ನು ಸಾಕಾರಗೊಳಿಸಿದೆ ಎಂದು ಭಾರತೀಯ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಹೇಳಿದ್ದಾರೆ.