10,000 ಕೋಟಿ ರೂ.ಗಳ ಸಾಮ್ರಾಜ್ಯ ಕಟ್ಟಿ, ಜೀವನ ಪರ್ಯಂತ ಸೆರೆವಾಸ!

ಅಹಮದಾಬಾದ್, ಏ.25-ಸಹಸ್ರಾರು ಅನುಯಾಯಿಗಳು ಮತ್ತು ಬೆಂಬಲಿಗರನ್ನು ಹೊಂದಿ 10,000 ಕೋಟಿ ರೂ.ಗಳ ಸಾಮ್ರಾಜ್ಯ ಕಟ್ಟಿ ಉತ್ತುಂಗದಲ್ಲಿ ಮೆರೆದಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಜೀವನ ಪರ್ಯಂತ ಸೆರೆವಾಸ ಅನುಭವಿಸುವಂತಾಗಿದೆ.
70ರ ದಶಕದಲ್ಲಿ ಗುಜರಾತ್‍ನ ಸಬರಮತಿ ನದಿ ದಂಡೆಯ ಮೇಲೆ ಮುರುಕಲು ಗುಡಿಸಲಿನಲ್ಲಿದ್ದ ಅಸಾರಾಂ ಕೇವಲ ನಾಲ್ಕು ದಶಕಗಳಲ್ಲಿ ಭಾರತ ಮತ್ತು ವಿಶ್ವದ ಅನೇಕ ದೇಶಗಳಲ್ಲಿ 400ಕ್ಕೂ ಹೆಚ್ಚು ಭವ್ಯ ಆಶ್ರಮಗಳನ್ನು ಸ್ಥಾಪಿಸಿ 10,000 ಕೋಟಿ ರೂ.ಗಳ ಸಂಪತ್ತಿನ ಸಾಮ್ರಾಜ್ಯ ಕಟ್ಟಿದ್ದು ಬೆರುಗು ಮೂಡಿಸುವಂಥದ್ದು. ಸಾಮಾನ್ಯ ಧಾರ್ಮಿಕ ಬೋಧಕನೊಬ್ಬ ಈ ಮಟ್ಟಿಗೆ ಬೆಳದಿದ್ದು ಅಚ್ಚರಿಯಲ್ಲದೇ ಮತ್ತೇನು?
ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಪೆÇಲೀಸರು ಮೊಟೆರಾ ಪ್ರದೇಶ ಸೇರಿದಂತೆ ಈತನ ಅಸಾರಾಂ ಆಶ್ರಮಗಳನ್ನು ಜಾಲಾಡಿದಾಗ ಪತ್ತೆಯಾದ ಆಸ್ತಿ ವಿವರಗಳು ಹುಬ್ಬೇರುವಂತೆ ಮಾಡಿದ್ದವು. ದಾಖಲೆಗಳ ಪ್ರಕಾರ ಸ್ವಘೋಷಿತ ದೇವ ಮಾನವನ ಆಸ್ತಿ-ಪಾಸ್ತಿಗಳ ಮೌಲ್ಯ 10,000 ಕೋಟಿ ರೂ.ಗಳು. ಬಹುಕೋಟಿ ರೂ.ಗಳ ಮೌಲ್ಯದ ಎಕರೆಗಟ್ಟಲೆ ಜಮೀನು, ಬೇನಾಮಿ ಸ್ವತ್ತುಗಳ ಬಗ್ಗೆ ಪೆÇಲೀಸರಿಗೆ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ.
ಅಸಾರಾಂ ಬಾಪು ಮೇಲೆ ಅತ್ಯಾಚಾರ ಆರೋಪಗಳು, ರಾಸಲೀಲೆ ಪ್ರಕರಣಗಳು, ಭೂಕಬಳಿಕೆ ಆರೋಪಗಳು, ಆಶ್ರಮದಲ್ಲಿ ಮಾಟ-ಮಂತ್ರ-ತಂತ್ರಗಳ ಆರೋಪಗಳೂ ಇವೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಸಾP್ಷÁ್ಯಧಾರಗಳು ಲಭ್ಯವಾಗಿಲ್ಲ.
1941ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಬೆರಾನಿ ಗ್ರಾಮದಲ್ಲಿ ಈತ ಜನಿಸಿದ. ಇವನ ಮೂಲ ಹೆಸರು ಅಸುಮಲ್ ಸಿರುಮಲಾನಿ. 1947ರಲ್ಲಿ ಭಾರತ-ಪಾಕ್ ವಿಭಜನೆ ನಂತರ ತನ್ನ ಕುಟುಂಬದೊಂದಿಗೆ ಈತ ಬಂದ್ದದ್ದು ಅಹಮದಾಬಾದ್‍ಗೆ. ಮಣಿನಗರ್‍ನಲ್ಲಿ ಶಾಲಾ ವ್ಯಾಸಂಗ ಮಾಡಿದ. ಆದರೆ ತಂದೆ ತೌಮಲ್ ನಿಧನವಾದ ಕಾರಣ 10 ವರ್ಷಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಣ್ಣಪುಟ್ಟ ಕೆಲಸಗಳನ್ನು ಮಾಡತೊಡಗಿದ. ಒಂದು ಸಂದರ್ಭದಲ್ಲಿ ತನ್ನ ಗುರು ಲೀಲಾಶಾ ಬಾಪು ಅವರಿಂದ ಆಧ್ಯಾತ್ಮಿಕ ವಿಷಯಗಳಲ್ಲಿ ಪ್ರಭಾವಿತನಾದ ಈತನಿಗೆ 1964ರಲ್ಲಿ ಅಸಾರಾಂ ಎಂದು ನಾಮಕರಣ ಮಾಡಲಾಯಿತು. ಆಗಿನಿಂದ ಈತನ ಅದೃಷ್ಟವೂ ಖುಲಾಯಿಸಿತು. ಧಾರ್ಮಿಕ ನಾಯಕನೆಂದು ಘೋಷಿಸಿಕೊಂಡು 1972ರಲ್ಲಿ ತನ್ನದೇ ಆದ ಮೋಕ್ಷ ಕುಟೀರ ಸ್ಥಾಪಿಸಿ, ಹಂತ ಹಂತವಾಗಿ ಬೆಳೆದ. ಜನಮರುಳೋ ಜಾತ್ರೆ ಮರುಳೋ ಎಂಬಂತೆ ದಿನೇ ದಿನೇ ಈತನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು.
ಈತ ಲಕ್ಷ್ಮೀ ದೇವಿ ಎಂಬಾಕೆಯನ್ನು ಮದುವೆಯಾಗಿದ್ದ. ಈತನಿಗೆ ಇಬ್ಬರು ಮಕ್ಕಳು. ಮಗ ನಾರಾಯಣ ಸಾಯಿ (ಈತನೂ ಜೈಲಿನಲ್ಲಿದ್ದಾನೆ) ಮತ್ತು ಮಗಳು ಭಾರತೀ ದೇವಿ.
2008ರಿಂದಲೂ ಒಂದಿಲ್ಲೊಂದು ವಿವಾದಗಳ ಸುಳಿಗೆ ಸಿಲುಕಿದ್ದ ಈತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದ. ಮಧ್ಯಪ್ರದೇಶದ ಚಿಂಡ್ವಾರಾದಲ್ಲಿನ ಅಸಾರಾಂನ ಆಶ್ರಮದಲ್ಲಿ ಓದುತ್ತಿದ್ದ ಉತ್ತರಪ್ರದೇಶದ ಶಹಜಾನ್‍ಪುರ್‍ನ 16ರ ಬಾಲಕಿ ಮೇಲೆ ಬಾಪು ಆಗಸ್ಟ್ 15, 2013ರಲ್ಲಿ ಅತ್ಯಾಚಾರ ಎಸಗಿದ್ದ. ಮಧ್ಯಪ್ರದೇಶದ ಇಂದೋರ್‍ನಲ್ಲಿ ಅಸಾರಾಂನನ್ನು ಬಂಧಿಸಿ ಸೆಪೆಂಬರ್ 1ರಂದು ಜೋಧ್‍ಪುರ್‍ಗೆ ಕರೆತರಲಾಗಿತ್ತು. ಸೆಪ್ಟೆಂಬರ್ 2, 2013ರಿಂದಲೂ ಸ್ವಯಂಘೋಷಿತ ದೇವಮಾನವ ನ್ಯಾಯಾಂಗ ವಶದಲ್ಲಿದ್ದಾನೆ. ಜಾಮೀನು ಕೋರಿ ಈತ ಸಲ್ಲಿಸಿದ್ದ 12 ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಿರಸ್ಕರಿಸಿದ್ದವು.
ಈ ಪ್ರಕರಣದ ವಿಚಾರಣೆ ಆರಂಭವಾಗಿ ವಿಶೇಷ ನ್ಯಾಯಾಲಯವು ಏ.7ರಂದು ತನ್ನ ವಿಚಾರಣೆಯನ್ನು ಹಾಗೂ ವಾದ-ಪ್ರತಿವಾದ ಆಲಿಕೆ ಪೂರ್ಣಗೊಳಿಸಿ ಏ.25ಕ್ಕೆ ಆದೇಶ ಕಾಯ್ದಿರಿಸಿ ಇಂದು ದೋಷಿ ಎಂದು ಘೋಷಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ