ಬೀದರ್‍ನಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಮತದಾನ ಹೆಚ್ಚಳಕ್ಕೆ ಮೊದಲ ಆದ್ಯತೆ ನೀಡಿ

ಬೀದರ್, ಏ. 25- ಬೀದರ್ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಮತದಾನ ಹೆಚ್ಚಳವಾಗುವಂತೆ ಮೊದಲ ಆದ್ಯತೆ ನೀಡಬೇಕು ಎಂದು ಉತ್ತರ ಪ್ರದೇಶ ಸಚಿವ, ಬಿಜೆಪಿ ಹಿರಿಯ ಮುಖಂಡ ಸ್ವತಂತ್ರದೇವ ಸಿಂಗ್ ಕರೆ ನೀಡಿದರು.

ನಗರದಲ್ಲಿ  ನಡೆದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದರೆ ಕೆಲವು ಸೂತ್ರ ಪಾಲಿಸುವುದು ಮುಖ್ಯ. ಪಕ್ಷದ ಸಂಘಟನೆ ಒತ್ತು ಕೊಡಬೇಕು. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಚುರುಕಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಪರಿಣಾಮಕಾರಿಯಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕು. ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ನಾವೆಲ್ಲರೂ ಒಂದೇ ಮನಸ್ಸಿನಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಗೆಲುವು ಸಾಧಿಸಲು ಸಾಧ್ಯ. ಎಲ್ಲರೂ ಒಗ್ಗೂಡಿ ಶಕ್ತಿ ಮೀರಿ ಕೆಲಸ ಮಾಡೋಣ ಎಂದು ಹೇಳಿದರು.
ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಪ್ರಮುಖರಾದ ಶಿವರಾಜ ಗಂದಗೆ, ಬಾಬು ವಾಲಿ, ದತ್ತು ತೂಗಾಂವಕರ್, ಜಯಕುಮಾರ ಕಾಂಗೆ, ಸೂರಜಸಿಂಗ್ ರಜಪುತ, ರಾಜಕುಮಾರ ಚಿದ್ರಿ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ