ಜೋಧ್ ಪುರ,ಏ.25:ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಜೋಧ್ ಪುರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಜೋಧ್ ಪುರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನ್ಯಾಯಾಲಯದ ನ್ಯಾಯಾಧೀಶರಾದ ಮಧುಸೂದನ್ ಶರ್ಮಾ ಬುಧವಾರ ತೀರ್ಪು ನೀಡಿದ್ದು, ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಮತ್ತು ಪ್ರಕರಣದ ಇತರೆ ಎಲ್ಲ ಆರೋಪಿಗಳು ದೋಷಿ ಎಂದು ತೀರ್ಪು ನೀಡಿದ್ದಾರೆ.
ಆಶ್ರಮದಲ್ಲಿ ಅಸಾರಾಂ ಬಾಪು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ 16 ವರ್ಷದ ವಿದ್ಯಾರ್ಥಿನಿ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಕೇಸ್ ದಾಖಲಿಸಿದ್ದಳು. ರಾಜಸ್ಥಾನ ಆಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿಯನ್ನು ಸ್ವಯಂಘೋಷಿತ ದೇವಮಾನವ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದ. ಈ ಪ್ರಕರಣ ಸಂಬಂಧ ಜೋಧಪುರ ಪೊಲೀಸರು ಅಸಾರಾಂನನ್ನು 2013ರ ಆಗಸ್ಟ್ 31ರಂದು ಬಂಧಿಸಿದ್ದರು. , ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.
ಇನ್ನು ಪ್ರಕರಣ ಸಂಬಂಧ 9 ಮಂದಿ ಸಾಕ್ಷಿ ಹೇಳಿದ್ದರು. ಈ ಪೈಕಿ 3 ಮಂದಿ ಅಸರಾಂಬಾಪು ಅನುಯಾಯಿಗಳ ದಾಳಿಯಲ್ಲಿ ಸಾವನ್ನಪ್ಪಿದ್ದರು.