ಮೈಸೂರು, ಏ.25- ಬಿಜೆಪಿಯವರು ಏನೇ ಮಾಡಿದರೂ ಕಾಂಗ್ರೆಸ್‍ಗೇ ಗೆಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಬಾದಾಮಿಯಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯವರು ನಮ್ಮ ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದು, ಸ್ಟಿಕ್ಕರ್ ಅಂಟಿಸುವುದು, ಮುಷ್ಟಿ ಅಕ್ಕಿ ಅಭಿಯಾನದಂತಹ ಯಾವುದೇ ಗಿಮಿಕ್ ಮಾಡಿದರೂ ಸಹ ಗೆಲ್ಲುವುದಿಲ್ಲ. ಕಾಂಗ್ರೆಸ್‍ಗೇ ಜಯ ಸಿಗಲಿದೆ ಎಂದರು.
ರಾಜ್ಯದ ಜನ ಈಗಾಗಲೇ ನಿರ್ಧರಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್‍ಅನ್ನೇ ಆರಿಸುತ್ತಾರೆ ಎಂದು ಹೇಳಿದರು.
ರಾಜ್ಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪ್ರಚಾರ ಕೈಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಕೌಂಟರ್ ಕೊಡುತ್ತೇವೆ. ನಾಳೆ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್‍ಗಾಂಧಿ ಅವರು ಏಳು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಹೊನ್ನಾವರ, ಬಂಟ್ವಾಳ, ಮುರುಡೇಶ್ವರ ಸೇರಿದಂತೆ ವಿವಿಧೆಡೆ ನಡೆಯುವ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದು, ತಾವು ಅದರಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.
ಇಂದು ಚಾಮುಂಡೇಶ್ವರಿಯಲ್ಲಿ ಕೊನೆ ಪ್ರಚಾರ ಎಂದ ಅವರು ಚುನಾವಣೆಗೆ ಎರಡು ದಿನ ಇರುವಾಗ ಬರುತ್ತೇವೆ. ಉಳಿದ ದಿನಗಳಂದು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುತ್ತೇವೆ. ಈಗಾಗಲೇ 150 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. 50-50 ಇರುವಂತೆ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಮತ ಪ್ರಚಾರ ನಡೆಸುತ್ತೇವೆ ಎಂದು ಸಿಎಂ ಹೇಳಿದರು.
ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ನೀಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರ ಅಲ್ಲ, ಅವರ ಅಪ್ಪ ಯಡಿಯುರಪ್ಪ ಬಂದು ನಿಂತರೂ ವರುಣಾದಲ್ಲಿ ನಾವೇ ಗೆಲ್ಲೋದು. ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ವರುಣಾದಲ್ಲಿ ಗೆಲುವು ನಮ್ಮದೇ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಕೆಲವು ಕಡೆ ಒಳ ಒಪ್ಪಂದ ಮಾಡಿಕೊಂಡಿವೆ. ಚಾಮುಂಡೇಶ್ವರಿ ಹಾಗೂ ವರುಣಾದಲ್ಲಿ ಸಹ ಅಧಿಕೃತವಾಗಿ ಎರಡೂ ಪಕ್ಷಗಳು ಒಳ ಒಪ್ಪಂದಕ್ಕೊಳಗಾಗಿವೆ. ಅದೇ ರೀತಿ ಕೆಆರ್ ನಗರ ಕ್ಷೇತ್ರದಲ್ಲೂ ನಡೆದಿದೆ ಎಂದು ಆರೋಪಿಸಿದರು.
ಜೆಡಿಎಸ್ ಶಕ್ತಿ ಪ್ರದರ್ಶನದ ಹಿನ್ನೆಲೆಯಲ್ಲಿ ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಇಂದು ಮೈಸೂರಿನಲ್ಲಿನ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಪಕ್ಷಕ್ಕೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದರು.
ಮೈಸೂರು ವಿವಿ ಇಬ್ಬರು ಪೆÇ್ರಫೆಸರ್‍ಗಳ ಅಮಾನತಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ , ಅದು ಖಾಸಗಿ ಕಾರ್ಯಕ್ರಮ. ಪ್ರಜಾಪ್ರಭುತ್ವ ಉಳಿಸಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ತಪ್ಪೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.