ಬೆಂಗಳೂರು ಏ 25: ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಅನಂತಕುಮಾರ್ ಅವರು ಇಂದು ಮಾಧ್ಯಮ ಗೋಷ್ಠಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್‍ಗಾಂಧಿಯವರಿಗೆ 5 ಪ್ರಶ್ನೆಗಳನ್ನು ಕೇಳಿದರು. ತಮ್ಮ ಸಭೆ, ಕಾರ್ಯಕ್ರಮಗಳಲ್ಲಿ ರಾಹುಲ್‍ಗಾಂಧಿ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.
ಪ್ರಶ್ನೆ. 1
ಕಳೆದ ನಾಲ್ಕುವರೆ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ 3,718 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಡೀ ದೇಶದಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ತುಂಬಾ ಕಡಿಮೆ.
ಪ್ರಶ್ನೆ. 2
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯುಪಿಎ ಸರ್ಕಾರ ಕರ್ನಾಟಕಕ್ಕೆ 10 ವರ್ಷಗಳಲ್ಲಿ ಪ್ರಕೃತಿ ವಿಕೋಪ ಮತ್ತು ಬರ ಪರಿಹಾರಕ್ಕೆ 4,822 ಕೋಟಿ ರೂ. ಬಿಡುಗಡೆ ಮಾಡಿತ್ತು. ಶ್ರೀ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ 3 ವರ್ಷಗಳಲ್ಲಿ ಪ್ರಕೃತಿ ವಿಕೋಪ ಮತ್ತು ಬರಪರಿಹಾರಕ್ಕೆ 5,693 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣ ಹೇಗೆ ವಿತರಣೆ ಆಗಿದೆ ಎಂಬುದರ ಬಗ್ಗೆ ವರದಿಯನ್ನು ಬಿಜೆಪಿ ಕೇಳಿತ್ತು. ಆದರೆ, ರಾಜ್ಯ ಸರ್ಕಾರ ವರದಿ ಕೊಟ್ಟಿಲ್ಲ. ಶ್ರೀ ನರೇಂದ್ರ ಮೋದಿ ಅವರು ಪರಿಹಾರದ ಹಣ ಕೊಟ್ಟರೂ ಸಿದ್ದರಾಮಯ್ಯ ಜನರಿಗೆ ಕೊಟ್ಟಿಲ್ಲ.
ಪ್ರಶ್ನೆ. 3
ಮಹಿಳೆಯರ ಸುರಕ್ಷತೆ, ಸಬಲೀಕರಣದ ಬಗ್ಗೆ ಸಹಾನುಭೂತಿ ಹೊಂದಿರುವುದಾಗಿ ರಾಹುಲ್‍ಗಾಂಧಿ ತೋರಿಸಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಇಂಡಿಯಾ ಗೇಟ್ ಬಳಿ ಮೇಣದ ದೀಪ ಹಚ್ಚಿ ಮೆರವಣಿಗೆಯನ್ನೂ ಮಾಡಿದ್ದರು. ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ 3,857 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. 800ಕ್ಕೂ ಹೆಚ್ಚು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. 7,523 ಮಹಿಳೆಯರ ಹತ್ಯೆಯಾಗಿದೆ. ಇದ ನ್ನು ಪ್ರತಿಭಟಿಸಿ ರಾಹುಲ್‍ಗಾಂಧಿ ಕರ್ನಾಟಕದಲ್ಲಿ ಪ್ರತಿಭಟನೆ ಮಾಡುವರೇ?
ಪ್ರಶ್ನೆ. 4
ಕೋಮು ಸೌಹಾರ್ದತೆಗಾಗಿ ಇತ್ತೀಚೆಗೆ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ತುಂಬಿದ ಹೊಟ್ಟೆಯಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿರುವ ಕರ್ನಾಟಕದಲ್ಲಿ 254 ಕೋಮು ಗಲಭೆ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರದ ತುಷ್ಠೀಕರಣ, ಓಟ್ ಬ್ಯಾಂಕ್ ರಾಜಕೀಯ ಇದಕ್ಕೆ ಕಾರಣವಾಗಿದೆ. ಬಹುಸಂಖ್ಯಾತರ ಮೇಲಿನ ದೌರ್ಜನ್ಯ, ದೌರ್ಜನ್ಯ ಮಾಡುತ್ತಿರುವವರಿಗೆ ರಕ್ಷಣೆ, ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳ 175 ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದಿರುವ ಕುರಿತು ರಾಹುಲ್ ಗಾಂಧಿ ಉತ್ತರಿಸಬೇಕು.
ಪ್ರಶ್ನೆ. 5
ಮೂಲಸೌಕರ್ಯ ಯೋಜನೆಗಳಲ್ಲಿ ಒಂದಕ್ಕಿಂತ ಒಂದು ದೊಡ್ಡ ಭ್ರಷ್ಟಾಚಾರಗಳು ನಡೆಯುತ್ತಿವೆ. ಇದಕ್ಕೆ ಬೆಂಗಳೂರಿನ ಆರ್ಟಿರಿಯಲ್ ವರ್ತುಲ ರಸ್ತೆ ಒಂದು ನಿದರ್ಶನವಾಗಿದೆ. 10.7 ಕಿ.ಮೀ ಉದ್ದದ ಈ ರಸ್ತೆ 468 ಕೋಟಿ ರೂ. ನಿಗದಿ ಪಡಿಸಲಾಗಿದೆ . ವಿಚಿತ್ರ ಅಂದರೆ, ಇಸ್ರೋನ ಮಂಗಳಯಾನ ಖರ್ಚಿಗಿಂತಲೂ ಇದು ಅಧಿಕ. ಇವೆರಡನ್ನೂ ಹೋಲಿಕೆ ಮಾಡಿ ರಾಹುಲ್‍ಗಾಂಧಿ ಏನು ಹೇಳುತ್ತಾರೆ ?
ರಾಹುಲ್‍ಗಾಂಧಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಪತನಕ್ಕೆ ಕ್ಷಣಗಣನೆ ಶುರುವಾಗಿದೆ. ಅವರು ಅಧ್ಯಕ್ಷರಾದ ಹೊಸ್ತಿಲಲ್ಲೇ ಹಿಮಾಚಲ ಪ್ರದೇಶ, ಮೇಘಾಲಯವನ್ನು ಕಳೆದುಕೊಂಡಿತು. ಈಗ ಕರ್ನಾಟಕದ ಸರದಿಯಾಗಿದ್ದು, ಮೇ.15ರ ನಂತರ ಪುದುಚೆರಿಯಲ್ಲಷ್ಟೆ ಕಾಂಗ್ರೆಸ್ ಅನ್ನು ಕಾಣಬಹುದಾಗಿದ್ದು, ಬರುವ ದಿನಗಳಲ್ಲಿ ಅಲ್ಲಿಯೂ ಕಾಣದಾಗಿ ಇಡೀ ದೇಶದಿಂದಲೇ ಮರೆಯಾಗಲಿದೆ. ರಾಹುಲ್‍ಗಾಂಧಿಯವರನ್ನು ದೇಶದ ಜನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅನಂತ ಕುಮಾರ್ ಹೇಳಿದರು
ಈ 5 ಪ್ರಶ್ನೆಗಳಿಗೆ ರಾಹುಲ್ ಗಾಂಧಿಯವರು ಮತ್ತು ಕರ್ನಾಟಕ ಕಾಂಗ್ರೆಸ್ ಹೇಗೆ ಉತ್ತರಿಸುವರು ಎಂದು ಕಾದು ನೋಡಬೇಕು