ಒಂದೆಡೆ ಕುಟುಂಬ ರಾಜಕಾರಣ ಕೊನೆಗೊಳ್ಳಬೇಕೆಂಬ ಮಾತು; ಇನ್ನೊಂದೆಡೆ ಅಪ್ಪ-ಮಕ್ಕಳೇ ಕಣಕ್ಕೆ

ಬೆಂಗಳೂರು, ಏ.24- ರಾಜಕೀಯದಲ್ಲಿ ಕುಟುಂಬ ರಾಜಕಾರಣ ಕೊನೆಗೊಳ್ಳಬೇಕೆಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಈ ಬಾರಿ ಅಪ್ಪ-ಮಕ್ಕಳೇ ಸ್ಪರ್ಧಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಎಂ.ಕೃಷ್ಣಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರಅವರುಗಳು ತಮ್ಮ ಪುತ್ರರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ವರುಣಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಗ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ, ನಿನ್ನೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಅಣ್ಣ-ತಮ್ಮಂದಿರು, ತಾಯಿ-ಮಗ, ಅತ್ತಿಗೆ-ನಾದಿನಿ, ಅಳಿಯ-ಸೋದರ ಮಾವ ಸೇರಿದಂತೆ ರಕ್ತ ಸಂಬಂಧಿಗಳೇ ಪರಸ್ಪರ ಜಿದ್ದಿಗೆ ಬಿದ್ದವರಂತೆ ಅಖಾಡಕ್ಕಿಳಿದಿದ್ದಾರೆ.

ರಾಜಕಾರಣದಲ್ಲಿ ರಕ್ತ ಸಂಬಂಧಿಗಳು ನಗಣ್ಯ ಎಂಬ ಮಾತೊಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅನೇಕ ಸಂದರ್ಭದಲ್ಲಿ ಅಪ್ಪ-ಮಕ್ಕಳು, ಅಣ್ಣ-ತಮ್ಮಂದಿರು, ತಾಯಿ-ಮಗಳು, ಅತ್ತೆ-ಸೊಸೆ ಹೀಗೆ ಕುಟುಂಬದವರೇ ಸ್ಪರ್ಧಿಸುವ ಮೂಲಕ ಸಂಬಂಧಗಳು ನಗಣ್ಯ ಎಂಬುದನ್ನು ರುಜುವಾತು ಮಾಡಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳೇ ಸ್ಪರ್ಧಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿದ್ದಾರೆ.
ಸಿದ್ದರಾಮಯ್ಯ-ಡಾ.ಯತೀಂದ್ರ:
ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಈ ಬಾರಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದರೆ ಅವರ ಪುತ್ರ ಡಾ.ಯತೀಂದ್ರ ಮೊದಲ ಬಾರಿಗೆ ಅಪ್ಪನ ಕ್ಷೇತ್ರವಾದ ವರುಣಾದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಚಾಮುಂಡೇಶ್ವರಿಯಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಸಿದ್ದರಾಮಯ್ಯ, ಇದೀಗ ಕೊನೆ ಚುನಾವಣೆಯನ್ನು ಅದೇ ಕ್ಷೇತ್ರದಿಂದಲೇ ಗೆದ್ದು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವ ಮಾತುಗಳನ್ನಾಡಿದ್ದಾರೆ.

2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಚಾಮುಂಡೇಶ್ವರಿ ಕ್ಷೇತ್ರದಿಂದ ವರುಣಕ್ಕೆ ಬಂದ ಸಿದ್ದರಾಮಯ್ಯನವರು ಎರಡು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದರು.
ಇದೀಗ ತಮ್ಮ ಪುತ್ರನನ್ನು ವರುಣಾದಿಂದ ಕಣಕ್ಕಿಳಿಸಿದ್ದಾರೆ. ಈವರೆಗೂ ಡಾ.ಯತೀಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಎದುರಾಳಿಯಾಗಬಹುದೆಂಬ ನಿರೀಕ್ಷೆಯಿತ್ತು. ನಿನ್ನೆಯಿಂದ ಎಲ್ಲ ರಾಜಕೀಯ ಲೆಕ್ಕಾಚಾರಗಳೂ ಬುಡಮೇಲಾಗಿವೆ.

ಎಂ.ಕೃಷ್ಣಪ್ಪ-ಪ್ರಿಯಕೃಷ್ಣ:
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ವಿಜಯನಗರದಿಂದ ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರದಿಂದ ಪುತ್ರ ಪ್ರಿಯಕೃಷ್ಣ ಸ್ಪರ್ಧಿಸಿದ್ದಾರೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಬಿನ್ನಿಪೇಟೆ ಕ್ಷೇತ್ರ ಮರೆಯಾಗಿ ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳು ಸೃಷ್ಟಿಯಾದವು. 2008ರಲ್ಲಿ ಗೋವಿಂದರಾಜನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಗೆದ್ದಿದ್ದರು.

ಅಂದು ಆಪರೇಷನ್ ಕಮಲಕ್ಕೆ ಒಳಗಾದ ಪ್ರಮುಖರಲ್ಲಿ ಸೋಮಣ್ಣ ಕೂಡ ಒಬ್ಬರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಎದುರಾಯಿತು. ಜಿದ್ದಾಜಿದ್ದಿನ ಕಣವಾಗಿದ್ದ ಉಪಚುನಾವಣೆಯಲ್ಲಿ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಎಂ.ಕೃಷ್ಣಪ್ಪನವರ ಪುತ್ರ ಪ್ರಿಯಕೃಷ್ಣ ಹಳೆ ಹುಲಿ ವಿ.ಸೋಮಣ್ಣ ಅವರನ್ನು ಪರಾಭವಗೊಳಿಸಿದ್ದರು.

ತದನಂತರ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎಚ್.ರವೀಂದ್ರ ಅವರನ್ನು ಭಾರೀ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಈಗ ಪ್ರಿಯಕೃಷ್ಣ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಅವರ ತಂದೆ ಕೃಷ್ಣಪ್ಪ ಪಕ್ಕದ ವಿಜಯನಗರದಲ್ಲಿಯೂ ಕೂಡ ಮೂರನೆ ಗೆಲುವಿನ ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ.

ಟಿ.ಬಿ.ಜಯಚಂದ್ರ-ಸಂತೋಷ್ ಜಯಚಂದ್ರ:
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಇದೇ ಮೊದಲ ಬಾರಿಗೆ ತಮ್ಮ ಪುತ್ರ ಸಂತೋಷ್ ಜಯಚಂದ್ರಗೆ ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವರ ವಿರೋಧದ ನಡುವೆಯೂ ಜಯಚಂದ್ರ ಮಗನನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಹಾಗೆ ನೋಡಿದರೆ ಚಿಕ್ಕನಾಯಕನಹಳ್ಳಿ ಮತ್ತು ಶಿರಾ ಅಕ್ಕಪಕ್ಕದ ಕ್ಷೇತ್ರಗಳು. ಮಗನನ್ನು ರಾಜಕೀಯದಲ್ಲಿ ಬೆಳೆಸಬೇಕೆಂಬ ಒಂದೇ ಕಾರಣಕ್ಕಾಗಿ ಮೊದಲ ಬಾರಿಗೆ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಮತದಾರನ ಚಿತ್ತ ಯಾರತ್ತ ಎಂಬುದಕ್ಕೆ ಮೇ 15ರ ಫಲಿತಾಂಶದವರೆಗೂ ಕಾಯಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ