ಬೀದರ್: ಎರಡು ದಿನ ನಗರದ ವಿವಿಧೆಡೆ ಸಂಚರಿಸಿದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಸೋಮವಾರ ದಿನವಿಡಿ ಕ್ಷೇತ್ರದ ನಾನಾ ಹಳ್ಳಿಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಕೈಗೊಂಡರು.
ಗಾದಗಿ, ಫತ್ತೆಪುರ, ಯರನಳ್ಳಿ, ಮರಖಲ್, ಜನವಾಡಾ ಮುಂತಾದ ಊರುಗಳಿಗೆ ತೆರಳಿದರು. ವಿವಿಧೆಡೆ ಗ್ರಾಮಗಳಲ್ಲಿ ಪಾದಯಾತ್ರೆ ಸಹ ನಡೆಸಿ ಸಮಾಜದ ಸಮಗ್ರ ಪ್ರಗತಿಗಾಗಿ ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಜನಪರ ಕೆಲಸ ಮಾಡಿದೆ. ಹತ್ತಾರು ವಿನೂತನ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಭಾಗದ ಜನರು, ರೈತರು ಎಲ್ಲರ ಹಿತದಿಂದ ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ. ಎಲ್ಲರೂ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಎಲ್ಲರೂ ಆಶೀರ್ವದಿಸಬೇಕೆಂದು ಕೋರಿದರು.
ಯಡಿಯೂರಪ್ಪ ಅವರು ಸಿಎಂ ಇದ್ದಾಗ ಅನೇಕ ಅಭಿವೃದ್ಧಿ ಕೆಲಸ ಆಗಿದ್ದವು. ಆದರೆ ನಂತರದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕ್ಷೇತ್ರದ ಶಾಸಕರು ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ತಾಲೂಕು ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಇತರರಿದ್ದರು.