![download (6)](http://kannada.vartamitra.com/wp-content/uploads/2018/04/download-6-14-288x381.jpg)
ಬೆಂಗಳೂರು, ಏ.24- ವರನಟ ಡಾ.ರಾಜ್ಕುಮಾರ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಬ್ಬರನ್ನೂ ಸ್ವಾಭಿಮಾನಿಗಳನ್ನಾಗಿ ಮಾಡುವುದೇ ನನ್ನ ಗುರಿ ಎಂದು ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಇಂದು ಮತ್ತಿಕೆರೆ ವಾರ್ಡ್ನಲ್ಲಿ ಗೋಪಾಲ ಬಡಾವಣೆ, ದಿವಾನರ ಪಾಳ್ಯ ಸೇರಿದಂತೆ ಮತ್ತಿತರ ಕಡೆ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ನಡೆಸಿದ ಅವರು, ವರನಟ ಡಾ.ರಾಜ್ಕುಮಾರ್ ಅವರ 90ನೆ ಹುಟ್ಟುಹಬ್ಬದ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಪ್ರತಿಯೊಬ್ಬ ಕನ್ನಡಿಗನೂ ಸ್ವಾಭಿಮಾನಿಯಾಗಬೇಕೆಂಬುದು ಅಣ್ಣಾವ್ರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದೇ ನನ್ನ ಏಕೈಕ ಗುರಿ. ಇದಕ್ಕೆ ಕ್ಷೇತ್ರದ ಮತದಾರರು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು.
ಡಾ.ರಾಜ್ಕುಮಾರ್ ನಾಡಿನ ಹೆಮ್ಮೆಯ ಪ್ರತೀಕ. ಅವರ ಕನ್ನಡಾಭಿಮಾನ ಹಾಗೂ ಕನ್ನಡ ಭಾಷೆ ಮೇಲೆ ಅವರಿಗಿರುವ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ. ಅವರ ಮಾರ್ಗದರ್ಶನದಲ್ಲೇ ನಾನು ಕೂಡ ನಡೆಯುತ್ತೇನೆ ಎಂದು ವಾಗ್ದಾನ ಮಾಡಿದರು.
ಇದಕ್ಕೂ ಮುನ್ನ ಡಾ.ಅಶ್ವತ್ಥ ನಾರಾಯಣ ಅವರು ಬೆಳಗಿನಿಂದಲೇ ಬಿಬಿಎಂಪಿ ಸದಸ್ಯರಾದ ಜಯಪ್ರಕಾಶ್, ಜೈಪಾಲ್ ಎನ್., ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೇಶವ ಐತಾಲ್, ಮತ್ತಿಕೆರೆ ವಾರ್ಡ್ ಅಧ್ಯಕ್ಷ ಸತ್ಯನಾರಾಯಣ, ಅಶ್ವತ್ಥ ನಾರಾಯಣ ಅವರ ಸಹೋದರ ಸತೀಶ್ ಸೇರಿದಂತೆ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ತೆರಳಿ ಮತಯಾಚನೆ ಮಾಡಿದರು.
ಮತ್ತಿಕೆರೆಯ ಅಟಲ್ಜೀ ಪಾರ್ಕ್, ಕೆಎನ್ ಬಡಾವಣೆ, ತ್ರಿವೇಣಿ ರಸ್ತೆ ಸೇರಿದಂತೆ ಮತ್ತಿತರ ಕಡೆ ಮನೆಗಳಿಗೆ ತೆರಳಿ ಮತ ಯಾಚಿಸಿದರೆ, ಕೆಲವು ಕಡೆ ಉದ್ಯಾನವನಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮೂರನೆ ಬಾರಿ ಆಶೀರ್ವದಿಸಿದರೆ, ಕ್ಷೇತ್ರಕ್ಕೆ ಇನ್ನೂ ಹೊಸ ಯೋಜನೆಗಳನ್ನು ಜಾರಿ ಮಾಡುವ ಆಶ್ವಾಸನೆ ಕೊಟ್ಟರು.
ಕ್ಷೇತ್ರದಲ್ಲಿ ಹಿರಿಯರ ಆಶೀರ್ವಾದ ಪಡೆದು ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಬೆಳಗಿನ ಉಪಹಾರ ಸೇವಿಸಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.