ಹುಬ್ಬಳ್ಳಿ, ಏ.24- ಲೋಕೋಪಯೋಗಿ ಸಚಿವ ಮಹದೇವಪ್ಪ ಅವರ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಮಾಡಿ ನಮ್ಮ ಪಕ್ಷದ ಮುಖಂಡರನ್ನು ಎದುರಿಸಲು ಮುಂದಾಗುತ್ತಿದೆ. ಇದೊಂದು ರಾಜಕೀಯ ಹುನ್ನಾರ. ಇದನ್ನು ನಾವು ಖಂಡಿಸುತ್ತೇವೆ. ಐಟಿ ದಾಳಿಯನ್ನು ನಾನು ವಿರೋಧಿಸುವುದಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಮಾಡುತ್ತಿರುವ ದಾಳಿ ರಾಜಕೀಯ ಪ್ರೇರಿತವಾಗಿದೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮನೆ ಮೇಲೆ ಐಟಿ ದಾಳಿಗಳು ಏಕೆ ನಡೆಯುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿಗಳು ಏಕೆ ನಡೆಯುತ್ತಿವೆ. ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರನ್ನು ಐಟಿ ದಾಳಿಗಳ ಮೂಲಕ ಕಟ್ಟಿಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಬಾದಾಮಿಯಲ್ಲಿ ನನ್ನ ವಿರುದ್ಧ ಯಡಿಯೂರಪ್ಪ, ಶ್ರೀರಾಮುಲು ಯಾರೇ ನಿಂತುಕೊಳ್ಳಲಿ. ನಾನು ಬಹುಮತದಿಂದ ಗೆಲ್ಲುತ್ತೇನೆ. ಉತ್ತರ ಕರ್ನಾಟಕದ ಜನರ ಆಸೆಯಂತೆ ನಾನು ಸ್ಪರ್ಧೆ ಮಾಡುತ್ತೇನೆ. ವರುಣಾ ಕ್ಷೇತ್ರದಲ್ಲಿ ಯಾರೇ ಸ್ಪರ್ಧೆ ಮಾಡಿದರೂ 50 ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದು ಹೇಳಿದರು.