ಗಂಗಾವತಿ, ಏ.24- ಕಾಡಿನಿಂದ ನಾಡಿಗೆ ಬಂದು ಜನರ ಭಯದಿಂದ ಮನೆಯೊಂದಕ್ಕೆ ನುಗ್ಗಿ ಬಚ್ಚಲು ಮನೆಯಲ್ಲಿ ಕರಡಿಯೊಂದು ಅಡಗಿ ಕುಳಿತಿದ್ದ ಘಟನೆ ತಾಲ್ಲೂಕಿನ ಜಂಗಮರ ಕಲ್ಕುಡಿ ಗ್ರಾಮದಲ್ಲಿ ನಡೆದಿದೆ.
ವಿಷಯ ತಿಳಿದು ಮನೆಯವರು ತಕ್ಷಣ ಹೊರಗೆ ಬಂದು ಬೀಗ ಹಾಕಿ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಸುರಕ್ಷಿತವಾಗಿ ಕರಡಿಯನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಘಟನೆಯ ವಿವರ: ನಿನ್ನೆ ಮಧ್ಯಾಹ್ನ ಗ್ರಾಮದ ಹೊರ ವಲಯದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ಕರಡಿ ದಾಳಿ ನಡೆಸಿತ್ತು. ತಕ್ಷಣ ಎಚ್ಚೆತ್ತ ಇತರರು ಕಡ್ಡಿ ಮತ್ತು ಬೆಂಕಿ ಹಾಕಿ ವನ್ಯ ಪ್ರಾಣಿಯನ್ನು ಅಲ್ಲಿಂದ ಓಡಿಸಿದ್ದರು.
ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಲಾಗಿತ್ತು. ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿತ್ತು. ಆದರೆ ಸೀದಾ ತುಂಗಭದ್ರಾ ನಾಲೆಯ ಮೂಲಕ ಗ್ರಾಮಕ್ಕೆ ನುಗ್ಗಿ ಹತ್ತಿರದ ಮನೆಯೊಂದರಲ್ಲಿ ಅಡಗಿದೆ.
ರಾತ್ರಿಯಾದ್ದರಿಂದ ಹೊರ ಬರಲಾಗದೆ ಸೀದಾ ಬಚ್ಚಲು ಮನೆಯ ನೀರಿನ ತೊಟ್ಟಿಯಲ್ಲಿ ಮಲಗಿಕೊಂಡಿತ್ತು. ಮನೆಯವರಿಗೂ ಈ ವಿಷಯ ತಿಳಿದಿರಲಿಲ್ಲ. ಮುಂಜಾನೆ ಮುಖ ತೊಳೆಯಲು ಹೋದಾಗ ಕರಡಿ ಇರುವುದನ್ನು ನೋಡಿ ಕಿರುಚಿಕೊಂಡು ಹೊರಗೆ ಬಂದಿದ್ದಾರೆ.
ನಂತರ ಗ್ರಾಮಸ್ಥರೆಲ್ಲಾ ಮನೆಯ ಮುಂದೆ ಜಮಾಯಿಸಿದ್ದಾರೆ. ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಅರವಳಿಕೆ ಚುಚ್ಚುಮದ್ದು ನೀಡಿ ಜಾಂಬವಂತನನ್ನು ಹಿಡಿದು ಸಾಗಿಸಿದ್ದಾರೆ.