ಮುಂಬೈ, ಏ.23-ಮಹಾರಾಷ್ಟ್ರದಲ್ಲಿ ಶಿವಸೇನಾ ನಾಯಕರ ಹತ್ಯೆ ಸರಣಿ ಮುಂದುವರಿದಿದ್ದು, ಪಕ್ಷದ ಕುರಾರ ಉಪ ಶಾಖ ಪ್ರಮುಖ ಸಚಿನ್ ಸಾವಂತ್ ಅವರನ್ನು ಅಪರಿಚಿತ ಬಂದೂಕುದಾರಿಗಳು ನಿನ್ನೆ ರಾತ್ರಿ ಮುಂಬೈನ ಕಾಂಡಿವಲಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ವೇಳೆ ಗೋಕುಲ್ನಗರ ಪ್ರದೇಶದಲ್ಲಿ 40 ವರ್ಷದ ಸಾವಂತ್ ಕಾರಿನಲ್ಲಿ ತೆರಳುತ್ತಿದ್ದಾಗ ಮೋಟಾರ್ಬೈಕ್ನಲ್ಲಿ ಹಿಂಬಾಲಿಸಿದ ಇಬ್ಬರು ಹಂತಕರು ವಾಹನ ಅಡ್ಡಗಟ್ಟಿ ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾದರು ಎಂದು ಕುರಾರ ಪೆÇಲೀಸ್ ಠಾಣೆ ಹಿರಿಯ ಇನ್ಸ್ಪೆಕ್ಟರ್ ಉದಯ್ಕುಮಾರ್ ರಾಜೆಶಿರ್ಕೆ ತಿಳಿಸಿದ್ದಾರೆ.
ಹಂತಕರ ಗುಂಡೇಟಿನಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾವಂತ್ ಅವರನ್ನು ಶಕ್ಷಣ ಶತಾಬ್ದಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲೇ ಅವರು ಕೊನೆಯುಸಿರೆಳೆದರು.
ಏಪ್ರಿಲ್ 20ರಂದು ಶಿವಸೇನಾ ನಾಯಕ ಶೈಲೇಶ್ ನಿಮ್ಸೆ(38) ಅವರನ್ನು ಥಾಣೆ ಜಿಲ್ಲೆಯ ಭೀವಂಡಿ ತಹಸೀಲ್ನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಗಣೇಶ್ಫುರಿ ಬಳಿ ಅರ್ಧ ಸುಟ್ಟು ಕರಕಲಾಗಿದ್ದ ಅವರ ಶವ ಪತ್ತೆಯಾಗಿತ್ತು. ಶೈಲೇಶ್ ಶಹಪುರ್ ತಹಸೀಲ್ನ ಸ್ಥಳೀಯ ಶಿವಸೇನೆ ನಾಯಕರಾಗಿದ್ದರು.