ಬೆಂಗಳೂರು, ಏ.23-ರಾಜ್ಯ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಇಂದು ಪ್ರಕಟವಾಗುವ ಸಾಧ್ಯತೆಗಳಿವೆ. ಆದರೆ ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಜೆಡಿಎಸ್ ವರಿಷ್ಠರು ಬಿ ಫಾರಂ ನೀಡಿ ನಾಮಪತ್ರ ಸಲ್ಲಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಟಿಕೆಟ್ ವಂಚಿತ ಸ್ಪರ್ಧಾಕಾಂಕ್ಷಿಗಳು ಕೊನೆ ಘಳಿಗೆಯಲ್ಲೂ ಜೆಡಿಎಸ್ ಸೇರಲು ಆಸಕ್ತಿ ತೋರುತ್ತಿರುವುದರಿಂದ ಮೂರನೇ ಪಟ್ಟಿ ಪ್ರಕಟಿಸುವುದು ವಿಳಂಬವಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈಗಾಗಲೇ ಬಹುತೇಕ ಅಭ್ಯರ್ಥಿಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಬಿ ಫಾರಂ ನೀಡಿದ್ದಾರೆ. ಹಲವು ಮಂದಿ ಜೆಡಿಎಸ್ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗಿಂತ ಮುನ್ನವೇ ಮೊದಲ ಹಂತದಲ್ಲಿ 126 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆ ಪಟ್ಟಿಯಲ್ಲೂ ಸಕ್ರಿಯರಾಗದ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗಿದೆ.
ಎರಡನೇ ಪಟ್ಟಿಯಲ್ಲಿ 57 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. 23 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ಬಾಕಿ ಉಳಿದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿರುವ ಬಿಎಸ್ಪಿಗೆ ಜೆಡಿಎಸ್ ಬಿಟ್ಟು ಕೊಟ್ಟಿದೆ.
ಜೆಡಿಎಸ್ನ ಅಂತಿಮ ಪಟ್ಟಿ ಪ್ರಕಟವಾಗದಿದ್ದರೂ ಆಯ್ಕೆಯಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ತೊಂದರೆಯಾಗದಂತೆ ವರಿಷ್ಠರು ಕ್ರಮಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.