
ಮೈಸೂರು, ಏ.23- ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಅಂಬರೀಶ್ ಅವರು ಸ್ಪರ್ಧಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ನಡೆ ಬಗ್ಗೆ ನೋ ಕಾಮೆಂಟ್ಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರದಿಂದ ನುಡಿದರು.
ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಸ್ಪರ್ಧಿಸುವುದು ಅಥವಾ ಸ್ಪರ್ಧೆಯಿಂದ ಹಿಂದೆ ಸರಿಯುವುದು ಅವರಿಗೆ ಬಿಟ್ಟ ವಿಚಾರ. ಅವರು ಸ್ಪರ್ಧಿಸುವುದಿಲ್ಲ ಎಂದಾದರೆ ಹೈಕಮಾಂಡ್ ಸೂಕ್ತ ಅಭ್ಯರ್ಥಿಯನ್ನು ಈ ಕ್ಷೇತ್ರಕ್ಕೆ ಕಣಕ್ಕಿಳಿಸಲಿದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಸ್ಟಾರ್ಗಳನ್ನು ಕರೆ ತರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಾದಾಮಿಯಲ್ಲಿ ಗೆಲುವು ನನ್ನದೇ. ಪ್ರಚಾರಕ್ಕಾಗಿ ನಾನು ಆ ಕ್ಷೇತ್ರಕ್ಕೆ ಹೋಗದೆ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಕರ್ನಾಟಕದಲ್ಲಿ ಬಿಜೆಪಿ ಹಾಗೂ ಹಳೆ ಮೈಸೂರಿನಲ್ಲಿ ಜೆಡಿಎಸ್ ನನಗೆ ಎದುರಾಳಿ ಎಂದು ಅವರು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಪ್ರಧಾನಿ ಅವರಿಗೆ ಸದ್ಯದಲ್ಲೇ ಪತ್ರ ಬರೆಯುವುದಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.