ನವದೆಹಲಿ, ಏ.23-ಸಮಸ್ಯೆಗಳ ಸುಳಿಗೆ ಸಿಲುಕಿರುವ ಏರ್‍ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿ ಹಣದ ಅಭಾವ ತೀವ್ರವಾಗಿ ಕಾಡುತ್ತಿದೆ. ಪ್ರತಿ ತಿಂಗಳು 200-250 ಕೋಟಿ ರೂ.ಗಳ ನಗದು ಕೊರತೆಯಿಂದಾಗಿ ಅಗತ್ಯವಾದ ಬಿಡಿಭಾಗಗಳನ್ನು ಖರೀದಿಸಲಾಗದೇ ವಿಮಾನಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಈ ಸಂಗತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಕೊಂಡಿದೆ.
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಗೆ ಈ ವಿಷಯ ತಿಳಿಸಿರುವ ಸಚಿವಾಲಯವು ನಗದು ಪ್ರವಹಿಸುವಿಕೆ ಮೇಲೆ ನಿರ್ಬಂಧ ಹೇರಿರುವುದರಿಂದ ವಿಮಾನಗಳು ಸ್ಥಗಿತಗೊಳ್ಳಲು ಕಾರಣವೆಂದು ಸ್ಪಷ್ಟಪಡಿಸಿದೆ.
ಈ ಹಿಂದೆ ವಿಮಾನಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಅವ್ಯವಹಾರಗಳ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆ ನಡೆಸುತ್ತಿರುವುದರಿಂದ ವಿಮಾನಗಳ ವಿಸ್ತರಣೆಗೆ ತೊಡಕಾಗಿದೆ ಎಂದು ಸಚಿವಾಲಯ ತಿಳಿಸಿದೆ.
ವಿಮಾನದ ಬಳಕೆ ಸುಧಾರಣೆಗಾಗಿ ಬಿಡಿ ಭಾಗಗಳ ಲಭ್ಯತೆಗಾಗಿ ಗರಿಷ್ಠ ಹಣಕಾಸು ಸಂಪನ್ಮೂಲಗಳನ್ನು ಉಪಯೋಗಿಸಲಾಗುತ್ತಿದೆಯಾದರೂ, ನಗದು ಕೊರತೆ ಎದುರಾಗಿದೆ.