ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ಗಂಭೀರ ಗಾಯ:

ತುಮಕೂರು, ಏ.23-ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿಪಟೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಲಾಪುರ ಗ್ರಾಮದ ದಿಲೀಪ್ (20) ಮೃತಪಟ್ಟ ಬೈಕ್‍ಸವಾರ.
ಕಳೆದ ರಾಥ್ರಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ದಿಲೀಪ್ ಮತ್ತು ಶಂಕರ್ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ದಿಲೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ಹಿಂಬದಿ ಸವಾರ ಶಂಕರ್‍ಗೆ ಗಂಭೀರ ಗಾಯಗಳಾಗಿದ್ದು, ರಸ್ತೆಯಲ್ಲೇ ಒದ್ದಾಡುತ್ತಿದ್ದರು. ಈ ಸಮಯದಲ್ಲಿ ಹಿಂದಿನಿಂದ ಬಂದ ಮತ್ತೊಂದು ಕಾರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿದ್ದ ಶಂಕರ್‍ನನ್ನು ಕಂಡು ಎಲ್ಲಿ ಕಾರಿ ಆತನ ಮೇಲೆ ಹರಿಯುತ್ತದೆಯೋ ಎಂದು ಗಾಬರಿಗೊಂಡು ಪಕ್ಕಕ್ಕೆ ಚಲಿಸಿದ್ದಾನೆ. ಈ ವೇಳೆ ಆತನ ಕಾರೂ ಪಲ್ಟಿ ಹೊಡೆದಿದೆ.
ಈ ವೇಳೆ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತಿಪಟೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಪರಾರಿಯಾಗಿದ್ದು, ಗ್ರಾಮಾಂತರ ಠಾಣೆಯ ಪಿಎಸ್‍ಐ ಕೃಷ್ಣಕುಮಾರ್, ಸಿಪಿಐ ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ