ಬೆಂಗಳೂರು, ಏ.22-ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದ ಜನರ ಒತ್ತಡದ ಮೇರೆಗೆ ಸಿದ್ದರಾಮಯ್ಯನವರು ಅಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೋಲಿನ ಭೀತಿಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಿದರೆ ತಪ್ಪೇನು. ಪ್ರಧಾನಿ ನರೇಂದ್ರ ಮೋದಿಯವರು ಎರಡೂ ಕಡೆ ಸ್ಪರ್ಧಿಸಿರಲಿಲ್ಲವೇ? ಅವರಿಗೆ ಸೋಲಿನ ಭೀತಿ ಕಾಡಿತ್ತೇ ಎಂದು ಪ್ರಶ್ನಿಸಿದರು.
ಇನ್ನು ಸಿದ್ದರಾಮಯ್ಯನವರು ತೀರ್ಮಾನ ಮಾಡಿಲ್ಲ. 24 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಏನಾಗುತ್ತದೆಯೋ ಕಾದು ನೋಡಬೇಕು ಎಂದರು.
ಅವರು ಎರಡು ಕಡೆ ಸ್ಪರ್ಧಿಸಿದರೆ ಎರಡೂ ಕಡೆಯೂ ಗೆಲ್ಲುತ್ತಾರೆ. ರಾಜ್ಯದಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ತಿಳಿಸಿದರು.
ಬಿಜೆಪಿಯವರು 50 ಸೀಟನ್ನು ಗೆಲ್ಲುವುದಿಲ್ಲ. ಅವರದ್ದು ಉತ್ತರನ ಪೌರುಷ ಎಂದು ರಾಮಲಿಂಗಾರೆಡ್ಡಿ ಹೇಳಿದರು