ಬೆಂಗಳೂರು, ಏ.22-ಮಕ್ಕಳ ಮೇಲಿನ ಅತ್ಯಾಚಾರ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗಲ್ಲು ಶಿಕ್ಷೆ ಜಾರಿಗೊಳಿಸಿರುವ ಕ್ರಮವನ್ನು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ದುಷ್ಕøತ್ಯಗಳನ್ನು ತಡೆಯಲು ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ನಾವು ಬೆಂಬಲ ನೀಡುತ್ತೇವೆ. ಆದರೆ ಇರುವ ಕಾನೂನುಗಳನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ, ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.
ಹೊಸ ಕಾನೂನುಗಳನ್ನು ಜಾರಿಗೊಳಿಸಿದ್ದೇವೆ ಎಂದು ಬೆನ್ನು ತಟ್ಟಿಕೊಂಡು ಹೇಳುವುದಕ್ಕಿಂತ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಸಮರ್ಪಕವಾಗಿ ಕಾನೂನುಗಳು ಜಾರಿಯಾಗದ ಹಿನ್ನೆಲೆಯಲ್ಲಿ ಅತ್ಯಾಚಾರದಂತಹ ಘಟನೆಗಳ ಪ್ರಮಾಣ ಹೆಚ್ಚಾಗಿದೆ. ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ಖರ್ಗೆ ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಗಿದ್ದರೂ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸಲ್ ದರ ಕಡಿಮೆಯಾಗಿಲ್ಲ. ಪ್ರಸ್ತುತ 30ರೂ.ಗಳಿಗೆ ಪೆಟ್ರೋಲ್, ಡೀಸಲ್ ಮಾರಾಟ ಮಾಡಬಹುದು. ಆದರೆ ಮಾಡುತ್ತಿಲ್ಲ. ಬೆಲೆ ಏರಿಕೆಯಿಂದ 1.67 ಲಕ್ಷ ಕೋಟಿ ಕೇಂದ್ರ ಸರ್ಕಾರಕ್ಕೆ ಲಾಭ ಬರುತ್ತಿದೆ ಎಂದು ಹೇಳಿದರು.
ನಮ್ಮ ಆಡಳಿತಾವಧಿಯಲ್ಲಿ 1 ರೂ, 2 ರೂ. ಬೆಲೆ ಏರಿಕೆಯಾದರೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಈಗ ಹತ್ತಾರು ಬಾರಿ ಬೆಲೆ ಏರಿಕೆಯಾದರೂ ಯಾರೂ ರೊಚ್ಚಿಗೇಳುತ್ತಿಲ್ಲ ಎಂದು ಖರ್ಗೆ ಹೇಳಿದರು.
ಸಂಸತ್ ಕಲಾಪ ಮುಂದೂಡಿಕೆಗೆ ಕಾಂಗ್ರೆಸ್ ಕಾರಣವಲ್ಲ. ನಾವು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೆವು. ಸರ್ಕಾರ ಚರ್ಚೆಗೆ ಅವಕಾಶ ನೀಡಿದ್ದರೆ ಸರ್ಕಾರದಬಣ್ಣ ಬಯಲು ಮಾಡುತ್ತಿದ್ದೆವು. ಆದರೆ ಇದಕ್ಕೆ ಅವಕಾಶ ಕೊಡದೆ ಕಲಾಪ ಮುಂದೂಡಿ ಅವರೇ ತಪ್ಪು ಮಾಡಿ ನಮ್ಮನ್ನು ದೋಷಿಗಳಂತೆ ಬಿಂಬಿಸುತ್ತಿದ್ದಾರೆ. ಕಲಾಪವನ್ನು ಮುಂದೂಡಿ ಕಾಂಗ್ರೆಸ್ ಕಾರಣ ಎಂದು ಉಪವಾಸ ಕೂರುತ್ತಾರೆ ಎಂದು ಖರ್ಗೆ ತಿರುಗೇಟು ನೀಡಿದರು.
ಪ್ರಧಾನಿ ಮೋದಿಯವರಿಗೆ ದಲಿತರ ಮೇಲೆ ಈಗ ಪ್ರೀತಿ ಬಂದಿದೆ. ದೇಶಾದ್ಯಂತ ದಲಿತರ ಮೇಲೆ ದೌರ್ಜನ್ಯ ನಡೆಯುವ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದ ಪ್ರಧಾನಿಯವರು ಈಗ ಇದ್ದಕ್ಕಿದ್ದಂತೆ ದಲಿತರ ಪರ ಮಾತನಾಡುತ್ತಿದ್ದಾರೆ ಎಂದರು.
ದೇಶದಾದ್ಯಂತ 16 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರೂ ರೈತರ ಸಾಲ ಮನ್ನಾ ಮಾಡಲಿಲ್ಲ, ಕೃಷಿಕರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಯಾವುದೇ ಸಮಸ್ಯೆಗಳನ್ನು, ಟೀಕೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಅವರು ಎದುರಿಸುವುದಿಲ್ಲ ಎಂದು ಖರ್ಗೆ ಹೇಳಿದರು.