
ಪಾಂಡವಪುರ, ಏ.22- ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಅವರು ನಾಮಪತ್ರ ಸಲ್ಲಿಸುವ ವೇಳೆ ನಡೆಯುವ ಬಹಿರಂಗ ಸಮಾವೇಶಕ್ಕೆ ಕ್ಷೇತ್ರದಿಂದ 10 ಸಾವಿರಕ್ಕೂ ಹೆಚ್ಚಿನ ದಲಿತರು ಆಗಮಿಸಲಿದ್ದಾರೆ ಎಂದು ದಲಿತ ಮುಖಂಡ ಎಂ.ಬಿ.ಶ್ರೀನಿವಾಸ್ ಹೇಳಿದರು.
ದಲಿತರು ಜೆಡಿಎಸ್ ಪಕ್ಷವನ್ನು ಮನಸ್ಸಾರೆ ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಬೆರಣಿಕೆಯಷ್ಟು ದಲಿತರು ಇತರೆ ಪಕ್ಷಗಳನ್ನು ಆಶ್ರಯಿಸಿದ್ದಾರೆ. ಪಕ್ಷದ ತಾತ್ವಿಕ ಮತ್ತು ಸೈದ್ದಾಂತಿಕ ಸಿದ್ಧಾಂತಗಳೆ ದಲಿತರು ಜೆಡಿಎಸ್ ಪಕ್ಷವನ್ನು ಅಪ್ಪಿಕೊಳ್ಳಲು ಕಾರಣ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಎಸ್‍ಪಿ ತಾಲೂಕು ಸಂಚಾಲಕ ನಲ್ಲಹಳ್ಳಿ ಸುರೇಶ್ ಮಾತನಾಡಿ, ಸಂಸದ ಸಿ.ಎಸ್.ಪುಟ್ಟರಾಜು ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಲು ಕಾರಣ ಬಿಎಸ್‍ಪಿ ಪಕ್ಷ ಎಂದರು.
ಸಾಹಿತಿ, ದಲಿತ ಸಂಘಟನೆಯ ನೇತಾರರಾಗಿರುವ ದೇವನೂರು ಮಹದೇವ ಅವರು ನಿನ್ನೆ ನಡೆದ ಸ್ವರಾಜ್ ಇಂಡಿಯಾ ಪಕ್ಷದ ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದರ್ಶನ್ ಪುಟ್ಟಣ್ಣಯ್ಯ ಅವರನ್ನು ನೈತಿಕವಾಗಿ ಬೆಂಬಲಿಸಬೇಕು ಎಂದಿದ್ದಾರೆ. ಆದರೆ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಬಲಿಸುವುದು ತರವಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಕೀಲ ಕಣಿವೆ ಯೋಗೇಶ್, ಸಣಬ ಶಿವಣ್ಣ, ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ರವೀಂದ್ರ ಸೇರಿದಂತೆ ಇತರರು ಇದ್ದರು.