ರಾಯಚೂರು.ಏ.22-ಅಹಿಂದ ಸರ್ಕಾರವೆಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎ.ಜೆ.ಸದಾಶಿವ ವರದಿ ಜಾರಿಗೊಳಿಸುವಲ್ಲಿ ರಾಜಕೀಯ ನಾಟಕವಾಡಿದ್ದಾರೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎ.ಜೆ.ಸದಾಶಿವ ವರದಿ ಜಾರಿಗೊಳಿಸುವ ನಾಟಕವಾಡಿದ್ದು, ದಲಿತ ಮುಖಂಡರೊಂದಿಗೆ ಕೇವಲ 5 ನಿಮಿಷದ ಸಭೆಗೆ ಸೀಮಿತಗೊಳಿಸಿದ ಮುಖ್ಯಮಂತ್ರಿಗಳ ನಡೆ ಅವರ ಕಾಳಜಿಯನ್ನು ಪ್ರದರ್ಶಿಸುತ್ತದೆ.
ದಲಿತ ಸಚಿವರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿರುವ ಮುಖ್ಯಮಂತ್ರಿಗಳು ಸಮಾಜವಾದಿಯ ಡೊಂಗೀ ನಾಟಕವಾಡುತ್ತಿದ್ದಾರೆ.
ಪರಿಶಿಷ್ಠ ಪಂಗಡ ಇಲಾಖೆಗೆ ಸೇರಿದ 84ಸಾವಿರ ಕೋಟಿ ರೂ ಅನುದಾನ ಬೇರೆ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದ್ದು ತಿಳಿದಿದ್ದರೂ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದು ನಮ್ಮದು ಅಹಿಂದ ಸರ್ಕಾರವೆಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಪ.ಪಂಗಡಗಳ ಇಲಾಖೆಗೆ ನೀಡಿರುವ ಅನುದಾನಗಳ ಕುರಿತು ಸರ್ಕಾರ ಶ್ವೇತ ಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ 34ಸಾವಿರ ಕೊಳವೆ ಭಾವಿಗಳನ್ನು ಕೊರೆಯಿಸಲು 1 ಕೊಳವೆ ಬಾವಿಯಿಂದ 4 ಸಾವಿರ ಕಿಕ್ಕ ಬ್ಯಾಕ್ ಹಣ ಪಡೆದಿರುವುದಲ್ಲದೇ ಕಳಪೆ ಗುಣಮಟ್ಟದ ಯಂತ್ರಗಳ ವಿತರಣೆ ಮಾಡಲಾಗಿದೆ. ಈ ಭಾಗದ ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 371ಜೆ ಅನುಷ್ಠಾನದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಸಾಮಾಜಿಕ ಅಸಮಾನತೆ ಹೋಗಲಾಡಿಸುವಲ್ಲಿ ಎಡವಿದೆ. ದಲಿತ ಪರ ದಲಿತ ಪರ ಎನ್ನುವ ಹೇಳಿಕೆ ಸೀಮಿತವಾಗಿರುವ ಸರ್ಕಾರ ದಲಿತರ ಕಿವಿಯಲ್ಲಿ ಹೂವು, ಮೂಗಿಗೆ ತುಪ್ಪ ಸವರಿದೆ. ಮುಂಬಡ್ತಿ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾದ ಮಾಡದ ಹಿನ್ನೆಲೆಯಲ್ಲಿ ಇಂದು ಹಿಂಬಡ್ತಿಯಲ್ಲಿ ದಲಿತರಿಗೆ ಅನ್ಯಾಯವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಹಿಂದುತ್ವದ ಕಡೆಗೆ ಕಾಂಗ್ರೆಸ್ ಪಕ್ಷ ಹೊರಟಿದೆ.
ಬಿಜೆಪಿ ಸರ್ಕಾರಕ್ಕೆ ದಲಿತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಪರ ಯೋಜನೆ ಹಾಕಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದು ಸಂವಿಧಾನ ಬದ್ಧ ಆಶಯಗಳನ್ನು ದುರ್ಬಲಗೊಳಿಸುವ ಹುನ್ನಾರದಿಂದಲೇ ಎಸ್.ಸಿ, ಎಸ್.ಟಿ ಕಾಯ್ದೆಯನ್ನು ದುರ್ಬಲಗೊಳಿಸುವಲ್ಲಿ ಕೇಂದ್ರ ಸರ್ಕಾರದ ಪಾಲಿದೆ ಎಂದು ಆರೋಪಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ್ನು ತಿರಸ್ಕರಿಸಿ ಬಿಎಸ್ಪಿ ಮತ್ತು ಜೆಡಿಎಸ್ನ್ನು ಬೆಂಬಲಿಸಲು ಏ.13ರಂದು ಬೆಂಗಳೂರಿನಲ್ಲಿ ನಡೆದ 200ಕ್ಕೂ ಹೆಚ್ಚು ದಲಿತ ಸಂಘಟನೆಗಳ ಒಕ್ಕೂಟ ನಿರ್ಧರಿಸಿದ್ದು, ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ, ದೇಶದಲ್ಲಿ ತೃತಿಯ ಶಕ್ತಿ ಹುಟ್ಟಿಗಾಗಿ ರಾಜ್ಯದ 224ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಬಿಎಸ್ಪಿ ಅಭ್ಯರ್ಥಿಗಳ ಪರವಾಗಿ ದಲಿತ ಸಂಘಟನೆಗಳು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಸಾಸಲಮರಿ, ಬೈಲಯ್ಯ ಹೊಸಮನಿ, ಅಶೋಕ, ನಂಜಲದಿನ್ನಿ, ರಾಜು ಬೊಮ್ಮನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.