ಬಂಡಾಯದ ಬೇಗುದಿಯನ್ನು ಶಮನಗೊಳಿಸಲು ರಾಜಕೀಯ ಪಕ್ಷಗಳ ಮುಖಂಡರ ಕಸರತ್ತು

ಬೆಂಗಳೂರು, ಏ.22-ಬಂಡಾಯದ ಬೇಗುದಿಯನ್ನು ಶಮನಗೊಳಿಸಲು ರಾಜಕೀಯ ಪಕ್ಷಗಳ ಮುಖಂಡರು ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ನಾಮಪತ್ರ ಸಲ್ಲಿಸಲು ಇನ್ನೆರಡು ದಿನ ಮಾತ್ರ ಬಾಕಿ ಇದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಪಕ್ಷಗಳಲ್ಲಿ ಬಂಡಾಯ ದಿನೇ ದಿನೇ ಉಲ್ಭಣಗೊಳ್ಳುತ್ತಲೇ ಇದೆ. ಬಂಡಾಯ ಶಮನಕ್ಕಾಗಿ ನಾಯಕರು ಅಹರ್ನಿಶಿ ಶ್ರಮ ವಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ವೇಣುಗೋಪಾಲ್ ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್‍ನ ಬಂಡಾಯ ಶಮನಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಅತ್ತ ಬಿಜೆಪಿಯ ಬಂಡಾಯದ ಬೆಂಕಿ ಆರಿಸಲು ರಾಜ್ಯಾಧ್ಯಕ್ಷ ಯಡಿಯೂರಪ್ಪ, ಅನಂತ್‍ಕುಮಾರ್, ಮುರಳೀಧರ್‍ರಾವ್ ಸೇರಿದಂತೆ ಅನೇಕರು ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ.

ಕುಣಿಗಲ್ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಬಿ.ಬಿ.ರಾಮಸ್ವಾಮಿಗೌಡ ಅವರ ಮನವೊಲಿಕೆ ಯತ್ನ ಸಫಲವಾಗಿದೆ. ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಟಿಕೆಟ್ ಕೈ ತಪ್ಪಿದ್ದರಿಂದ ಪರ್ಯಾಯ ಚಿಂತನೆ ನಡೆಸಿದ್ದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನವೊಲಿಸಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಂಧಾನ ನಡೆಸಿದ್ದು, ಫಲ ನೀಡಿತು.
ಮಂಡ್ಯದಲ್ಲಿ ಅಂಬರೀಶ್ ಕಣಕ್ಕಿಳಿಯಲು ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಂಬರೀಶ್ ಅವರು ಕಣಕ್ಕಿಳಿಯಲಿದ್ದಾರೆಯೇ ಅಥವಾ ಅವರು ಹೇಳಿದವರಿಗೆ ಟಿಕೆಟ್ ಸಿಗುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಅಂಬಿ ಅವರ ಮನವೊಲಿಕೆ ಯತ್ನ ಮುಂದುವರೆದಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದ ಟಿಕೆಟ್ ವಂಚಿತ ಹಲವರು ಬಂಡಾಯದ ಬಾವುಟ ಹಾರಿಸಿದ್ದು, ಅವರನ್ನು ಮನವೊಲಿಸುವ ಕೊನೆಯ ಯತ್ನ ನಡೆಯುತ್ತಿದೆ.
ಬಿಜೆಪಿ ಟಿಕೆಟ್ ವಂಚಿತ ರೇವೂ ನಾಯಕ್ ಬೆಳಮಗಿ ಅವರು ಬೇಸತ್ತು ಜೆಡಿಎಸ್ ಸೇರಲು ನಿರ್ಧರಿಸಿದ್ದು, ನಿನ್ನೆ ಬಿಜೆಪಿ ನಾಯಕರು ಅವರ ಮನವೊಲಿಸುವ ಕೊನೆ ಕ್ಷಣದ ಪ್ರಯತ್ನ ನಡೆಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರ ಮನವೊಲಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ. ಚಿಕ್ಕಪೇಟೆ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿದ್ದ ಭಿನ್ನಮತವನ್ನು ಶಮನಗೊಳಿಸಿರುವ ನಾಯಕರು ಅಧಿಕೃತ ಅಭ್ಯರ್ಥಿ ಪರ ಪ್ರಚಾರ ನಡೆಸಲು ಸೂಚನೆ ನೀಡಿದ್ದಾರೆ.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ ಅವರಿಗೆ ಬಂಡಾಯದ ಭೀತಿ ಎದುರಾಗಿದೆ. ಇವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.ಮಲ್ಲಿಕಾರ್ಜುನ್ ಸೇರಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ವಿ.ಧನಂಜಯ್ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸುವ ಮಾತುಗಳು ಕೇಳಿ ಬಂದಿದ್ದು, ಕಾಂಗ್ರೆಸ್ ಮುಖಂಡರು ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಪಕ್ಷದಲ್ಲೂ ಹಲವೆಡೆ ಬಂಡಾಯದ ಮಾತುಗಳು ಕೇಳಿ ಬಂದಿವೆ. ನಾಯಕರು ಬಂಡಾಯಗಾರರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಏ.24ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಅಲ್ಲಿಯವರೆಗೂ ಬಂಡಾಯಗಾರರ ಮನವೊಲಿಸುವ ಪ್ರಯತ್ನವನ್ನು ವಿವಿಧ ಪಕ್ಷಗಳ ನಾಯಕರು ಮುಂದುವರೆಸಿದ್ದಾರೆ.
ಬಂಡಾಯಗಾರರಾಗಿ ನಾಮಪತ್ರ ಸಲ್ಲಿಸಿರುವ ಹಲವರನ್ನು ನಾಮಪತ್ರ ಹಿಂಪಡೆಯಲು ಏ.27 ಕೊನೆಯ ದಿನಾಂಕದವರೆಗೂ ನಾಯಕರು ಮನವೊಲಿಸುವ ಪ್ರಯತ್ನವನ್ನು ಮಾಡುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ