
ಮೈಸೂರು, ಏ.22-ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಇದೇ 24 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಸೋಲಿನ ಭಯದಿಂದ ಬಾದಾಮಿಯಲ್ಲಿ ಸ್ಪರ್ಧಿಸುತ್ತಿಲ್ಲ. ಉತ್ತರ ಕರ್ನಾಟಕದ ಜನತೆಯ ಒತ್ತಾಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ಎಸ್.ಆರ್.ಪಾಟೀಲ್, ತಿಮ್ಮಾಪುರ್ ಅವರ ತೀವ್ರ ಒತ್ತಾಯದಿಂದ ಇಲ್ಲಿ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಆ ಪ್ರದೇಶವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸಬೇಕಿದೆ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಜನ ನನ್ನನ್ನು ಆಶೀರ್ವದಿಸಲಿದ್ದಾರೆ. ಬಾದಾಮಿಯಲ್ಲಿ ನನ್ನ ವಿರುದ್ಧ ಇತರೆ ಪಕ್ಷದವರು ಎಷ್ಟೇ ಪ್ರಬಲ ಅಭ್ಯರ್ಥಿಯನ್ನು ಹಾಕಿದರೂ ತಾವು ಕೇರ್ ಮಾಡುವುದಿಲ್ಲ ಎಂದರು.
ಪ್ರಧಾನಿ ಮೋದಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲವೇ? ಹೀಗಿರುವಾಗ ನಾನೇಕೆ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದರು.
ರೇವಣಸಿದ್ದಯ್ಯ ಅವರು ಯಾರಿಗಾದರೂ ಬೆಂಬಲ ನೀಡಲಿ, ಅದರಿಂದ ನನಗೇನೂ ಲಾಭ ಅಥವಾ ನಷ್ಟವಿಲ್ಲ ಎಂದ ಅವರು, ಬಾದಾಮಿಯಲ್ಲಿ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಎದುರಾಳಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಮ್ಮದೇನಿದ್ದರೂ ಕೋಮುವಾದದ ವಿರುದ್ಧ ಹೋರಾಟ ಎಂದು ತಿಳಿಸಿದರು.
ವರುಣ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದು ವಿಜಯೇಂದ್ರ ಅವರು ಪ್ರದರ್ಶಿಸಿರುವ ಕಿರುಚಿತ್ರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅವರಿಗೆ ರಾಜಕೀಯ ಅನುಭವ ಎಲ್ಲಿದೆ? ಇನ್ನೂ ಅವರು ಪಳಗಿಲ್ಲ ಎಂದು ನುಡಿದರು.
ಅಂಬರೀಶ್ ಅವರ ವಿಚಾರ ಮುಗಿದಿದೆ. ಅವರ ಬಗ್ಗೆ ಯಾಕೆ ಕೇಳ್ತೀರಿ ಎಂದು ಉತ್ತರಿಸಲು ನಿರಾಕರಿಸಿದರು.
ಎಚ್.ಡಿ.ಕೋಟೆಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಅವರೊಂದಿಗೆ ಮಾತುಕತೆ ನಡೆಸಿದರು. ನಂತರ ಅಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಲಿಂದ ಚಾಮುಂಡೇಶ್ವರಿಕ್ಷೇತ್ರಕ್ಕೆ ತೆರಳಿ ಮತ ಪ್ರಚಾರದಲ್ಲಿ ತೊಡಗಿದರು.