ಬಾದಾಮಿಯಿಂದ ಸಂಸದ ಶ್ರೀರಾಮುಲು ಕಣಕ್ಕಿಳಿಸಲು ಬಿಜೆಪಿ ಸಜ್ಜು

ಬೆಂಗಳೂರು,ಏ.21-ಬಾದಾಮಿ ರಹಸ್ಯ ಬಯಲಾಗದಿದ್ದರೂ ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದ್ದು, ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಮುಖಂಡರು ಸಿಎಂ ವಿರುದ್ಧ ಬಳ್ಳಾರಿ ಸಂಸದ ಶ್ರೀರಾಮುಲು ಅವರನ್ನು ಅಸ್ತ್ರವನ್ನಾಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

ಹೈಕಮಾಂಡ್ ಸೂಚಿಸಿದರೆ ಬಾದಾಮಿಯಿಂದ ಸ್ಪರ್ಧಿಸಲು ಸಿದ್ದ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಇದೇ 23ರಂದು ಬಾದಾಮಿಯಿಂದ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತಪಟ್ಟಿದೆ.

ಅಂದುಕೊಂಡಂತೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸಿದ್ದೇ ಆದರೆ ಹೈದರಾಬಾದ್ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿರುವ ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿರುವ ಬಳ್ಳಾರಿ ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಫರ್ಧಿಸಿದರೆ ಅವರ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಮೊಳಕಾಲ್ಮೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀರಾಮುಲು ಅವರನ್ನೇ ಸಿದ್ದು ವಿರುದ್ದ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಬಾದಾಮಿಯಲ್ಲಿ ಕುರುಬ ಮತಗಳು ಹೆಚ್ಚಿದ್ದು , ಅದರೊಂದಿಗೆ ಪರಿಶಿಷ್ಟ ಜಾತಿ, ಪಂಗಡಗಳ ಮತಗಳು ನಿರ್ಣಾಯಕವಾಗಿವೆ. ಈ ಕಾರಣದಿಂದ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವುದು ಕೈ ನಾಯಕರ ಲೆಕ್ಕಾಚಾರವಾಗಿದೆ.

ವಿಧಾನಸಭೆಯಲ್ಲಿ ತಮ್ಮ ವಿರುದ್ದ ತೊಡೆ ತಟ್ಟಿ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿ ರೆಡ್ಡಿ ಸಾಮ್ರಾಜ್ಯದ ನಿರ್ನಾಮಕ್ಕೆ ಮುನ್ನುಡಿ ಬರೆದಿದ್ದ ಸಿದ್ದರಾಮಯ್ಯ ಅವರ ವಿರುದ್ದ ಹಗೆ ತೀರಿಸಿಕೊಳ್ಳಲು ಪಣ ತೊಟ್ಟಿರುವ ರೆಡ್ಡಿ ಸಹೋದರರು ಬಾದಾಮಿಯಿಂದ ಸ್ಫರ್ಧಿಸಲು ತೀರ್ಮಾನಿಸಿರುವ ಸಿಎಂ ಲೆಕ್ಕಾಚಾರಕ್ಕೆ ತಿರುಗೇಟು ನೀಡಲು ತಂತ್ರ ರೂಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ನಾನು ಅಖಾಡಕ್ಕಿಳಿಯಲು ಸಿದ್ಧ ಎಂದು ಶ್ರೀರಾಮುಲು ಘೋಷಿಸಿರುವುದರಿಂದ ಬಾದಾಮಿ ಸಿದ್ದು ವರ್ಸಸ್ ಶ್ರೀರಾಮುಲು ನಡುವಿನ ಕದನ ಕಣವಾಗಿ ಮಾರ್ಪಾಡುವ ನಿರೀಕ್ಷೆಯಿದೆ.

ತಮ್ಮ ಸಾಮ್ರಾಜ್ಯ ಪತನಕ್ಕೆ ಕಾರಣರಾದ ಸಿದ್ದರಾಮಯ್ಯ ವಿರುದ್ದ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಗಣಿಧಣಿ ಜನಾರ್ಧನ್ ರೆಡ್ಡಿ ಅವರು, ಶ್ರೀರಾಮುಲು ಅವರನ್ನೇ ಅಸ್ತ್ರವನ್ನಾಗಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಭಾಗದಲ್ಲಿರುವ ಶ್ರೀರಾಮುಲು ಅವರ ವರ್ಚಸ್ಸು ಮತ್ತು ಬಾದಾಮಿಯಲ್ಲಿ ಅತಿ ಹೆಚ್ಚಿರುವ ವೀರಶೈವರ ಮತಗಳು ಮತ್ತು ಸಿದ್ದು ವಿರುದ್ಧದ ಪ್ರತ್ಯೇಕ ಧರ್ಮ ವಿರೋಧಿ ಅಲೆಯ ಲಾಭ ಪಡೆದುಕೊಂಡರೆ ಸಿದ್ದರಾಮಯ್ಯ ಅವರನ್ನು ಸುಲಭವಾಗಿ ಸೋಲಿಸಬಹುದು ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನಗಳ ಕಾಲಾವಕಾಶವಿದೆ. ರಾಜಕೀಯ ಲೆಕ್ಕಾಚಾರಗಳು ಏನಾಗುತ್ತವೆಯೋ ಯಾವ ಪಕ್ಷಗಳು ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ