ಬೆಂಗಳೂರು, ಏ.21-ನಕಲಿ ಮತದಾರÀರಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.
ನಗರದ ಚಿತ್ರಕಲಾ ಪರಿಷತ್ತಿನಲ್ಲಿಂದು ಮತದಾರರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಛಾಯಾಚಿತ್ರ ಹಾಗೂ ಪ್ರಚಾರ ಸಾಮಾಗ್ರಿಗಳ ಪ್ರದರ್ಶನ ಖ್ಯಾತ ವ್ಯಂಗ್ಯ ಚಿತ್ರಕಾರರರ ವ್ಯಂಗ್ಯ ಚಿತ್ರಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಪ್ರಸ್ತುತ 89 ಲಕ್ಷ ಮತದಾರರಿದ್ದು, ನಕಲಿ ಮತದಾರರ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿದ್ದು, ಜೊತೆಗೆ ಕೆಲ ಸಮುದಾಯಗಳನ್ನು ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲದರ ಬಗ್ಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಕಲಿ ಮತದಾರರ ವಿರುದ್ಧ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದ್ದು, ನಾವು ಆ ಬಗ್ಗೆ ಸೂಕ್ತ ಕ್ರಮವಹಿಸಲಿದ್ದೇವೆ ಎಂದ ಭರವಸೆ ನೀಡಿದ ಅವರು, ಸೀರೆ, ಕುಕ್ಕರ್ ಸೇರಿದಂತೆ ಗೃಹ ಬಳಕೆ ಸಾಮಗ್ರಿಗಳನ್ನು ಹಂಚಿಕೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆಯೂ ನಮಗೆ ಮಾಹಿತಿ ಕೊಡಿ ಎಂದು ಸೂಚಿಸಿದರು.
ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವ್ಯಂಗ್ಯ ಚಿತ್ರ ಬಳಸಲಾಗುತ್ತಿದೆ. ಜನರ ಜೊತೆ ಸಂಪರ್ಕ ಸಾಧಿಸಿ ಡಿಜಿಟಲ್ ಮೀಡಿಯಾ ಸೇರಿದಂತೆ ಎಲ್ಲ ರೀತಿಯಲ್ಲೂ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಮತದಾರರನ್ನು ಚುನಾವಣೆಯತ್ತ ಆಕರ್ಷಿಸಲು ಕೈಗೊಂಡಿರುವ ಅಭಿಯಾನದಲ್ಲಿ ಸಾಕ್ಷ್ಯಚಿತ್ರಗಳ ಪ್ರದರ್ಶನ, ಯಕ್ಷಗಾನ ಹಾಗೂ ಡೊಳ್ಳುಕುಣಿತದ ಸಾಕ್ಷ್ಯಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. 11 ಜನ ವ್ಯಂಗ್ಯ ಚಿತ್ರಕಲಾವಿದರಿಂದ ಚಿತ್ರ ಪ್ರದರ್ಶನ ನಡೆಯುತ್ತಿದೆ. ಹಲವಾರು ಚಿತ್ರಗಳು ಬಹಳಷ್ಟು ಜನರ ಗಮನ ಸೆಳೆಯುತ್ತಿವೆ ಎಂದು ಹೇಳಿದರು.