ಬೆಂಗಳೂರು: ಏ.21-ಹೈಕೋರ್ಟ್‍ನಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಬೆಂಗಳೂರು ವಕೀಲರ ಸಂಘ (ಅಡ್ವೊಕೇಟ್ ಅಸೋಸಿಯೇಷನ್ ಆಫ್ ಬೆಂಗಳೂರು) ಸುಪ್ರೀಂಕೋರ್ಟ್‍ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಚೆಲಮೇಶ್ವರ್ ಅವರಲ್ಲಿ ಮನವಿ ಮಾಡಿದೆ.
ಈ ಕುರಿತು ನ್ಯಾ. ಚೆಲಮೇಶ್ವರ್ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಈ ಬಗ್ಗೆ ಹಿಂದಿನಿಂದಲೂ ಪುನರಾವರ್ತಿತವಾಗಿ ಮನವಿಗಳನ್ನು ಮಾಡುತ್ತಲೇ ಬಂದಿದ್ದರೂ ನಿರೀಕ್ಷಿತ ಫಲ ಲಭಿಸಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಬಾರ್ ಕೌನ್ಸಿಲ್ ಶಿಫಾರಸು ಮಾಡಿರುವ ಎರಡು ಹೆಸರುಗಳನ್ನು ನೇಮಕಕ್ಕೆ ಪರಿಗಣಿಸಬೇಕು. ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿರುವ ಶಿಫಾರಸು ಮಾಡಲಾದ ಹೆಸರುಗಳನ್ನು ಕೂಡಲೇ ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ರಾಜ್ಯ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಹೆಸರನ್ನು ಮುಂದಿನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಜನವರಿ 1, 2017ರಿಂದ ಇಲ್ಲಿಯವರೆಗೆ ದೇಶದ ವಿವಿಧ ಹೈಕೋರ್ಟ್‍ಗಳಿಗೆ 150 ನೇಮಕಾತಿಗಳನ್ನು ಮಾಡಲಾಗಿದೆ. ಆದರೆ ಕರ್ನಾಟಕ ಹೈಕೋರ್ಟ್‍ಗೆ ಕೇವಲ ಏಳು ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ನ್ಯಾಯಮೂರ್ತಿಗಳ ನೇಮಕಕ್ಕೆ ಕರ್ನಾಟಕ ಉಚ್ಧ ನ್ಯಾಯಾಲಯದ ನ್ಯಾಯಮೂರ್ತಿಗಳ ಮಂಡಳಿ (ಕೊಲಿಜಿಯಂ) ಹಾಗೂ ವಕೀಲರ ಸಂಘವು ಶಿಫಾರಸು ಮಾಡಿರುವ ಹೆಸರುಗಳು ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ಐವರು ನ್ಯಾಯಾಧೀಶರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ. ಆದರೆ ನೇಮಕಾತಿಯಲ್ಲಿ ಹಿರಿತನದ ಮಾನದಂಡವನ್ನು ಪಾಲಿಸಿಲ್ಲ. ಕರ್ನಾಟಕ ಹೈಕೋರ್ಟ್‍ನಲ್ಲಿ ನ್ಯಾಯಾಧೀಶರ ಕೊರತೆ ಇದೆ. ಕರ್ನಾಟಕ ಹೈಕೋರ್ಟ್‍ನಲ್ಲಿ ಈಗಿರುವ ನ್ಯಾಯಾಧೀಶರ ಸಾಮಥ್ರ್ಯ ಶೇ.50ಕ್ಕಿಂತಲೂ ಕಡಿಮೆ ಎಂದು ರಂಗನಾಥ್ ಹೇಳಿದ್ದಾರೆ.
ಇತರ ಪುಟ್ಟ ರಾಜ್ಯಗಳಲ್ಲಿ ಹೆಚ್ಚು ನ್ಯಾಯಾಧೀಶರಿದ್ದಾರೆ. ಆದರೆ ಕರ್ನಾಟಕದಲ್ಲಿ ತೀವ್ರ ಕೊರತೆ ಇದೆ. ಇದನ್ನು ಸರಿಪಡಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.