ಬಿಜೆಪಿ ಮೂರನೇ ಪಟ್ಟಿ ಪ್ರಕಟ ಹಿನ್ನಲೆ: ಪಕ್ಷದಲ್ಲಿ ಭಿನ್ನಮತ ಆಸ್ಪೋಟ

ಬೆಂಗಳೂರು,ಏ.21-ಬಿಜೆಪಿ ಮೂರನೇ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಪಕ್ಷದಲ್ಲಿ ಭಿನ್ನಮತ ಆಸ್ಪೋಟಗೊಂಡಿದೆ. ಟಿಕೆಟ್ ವಂಚಿತರು ನಾಯಕರ ವಿರುದ್ದ ತಿರುಗಿ ಬಿದ್ದಿದ್ದು , ಕೆಲವರು ಕಮಲ ಬಿಟ್ಟು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಹರಪನಹಳ್ಳಿ , ಮೈಸೂರಿನ ಕೃಷ್ಣರಾಜ, ಮಾಯಕೊಂಡ, ಕಲ್ಬುರ್ಗಿ ಗ್ರಾಮೀಣ, ಬಸವಕಲ್ಯಾಣ, ಸಾಗರ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ದ ಸಮರ ಸಾರಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಕಾತರದಲ್ಲಿದ್ದ ಆಕಾಂಕ್ಷಿಗಳು ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರ ಪರಿಣಾಮ ನಾಯಕರ ವಿರುದ್ಧ ಕತ್ತಿ ಝಳಪಿಸಿದ್ದಾರೆ.
ತಾವು ನಂಬಿದ್ದ ನಾಯಕರೇ ನಡು ನೀರಿನಲ್ಲಿ ಕೈ ಬಿಟ್ಟರು.ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ್ದು ನಾವು ಚುನಾವಣೆ ಬಂದಾಗ ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಅವರ ಪರ ನಾವು ಹೇಗೆ ಕೆಲಸ ಮಾಡಬೇಕೆಂದು ಟಿಕೆಟ್ ವಂಚಿತರು ಪ್ರಶಿಸಿದ್ದಾರೆ.

ಸಾಗರ ಕ್ಷೇತ್ರದಿಂದ ಟಿಕೆಟ್ ಸಿಗದೆ ಬಿಜೆಪಿ ವಿರುದ್ದ ಬಹಿರಂಗವಾಗಿಯೇ ತೊಡೆ ತಟ್ಟಿರುವ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಮಲಕ್ಕೆ ಸೋಡಾ ಚೀಟಿ ನೀಡಿದ್ದಾರೆ.
ಅಚ್ಚರಿಯ ಬೆಳವಣಿಗೆ ಎಂಬಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಬೇಳೂರು ಕಾಂಗ್ರೆಸ್‍ಗೆ ಸೇರಿ ತಮ್ಮ ಮಾವ ಸಚಿವ ಕಾಗೋಡು ತಿಮ್ಮಪ್ಪಗೆ ಬೆಂಬಲ ಸೂಚಿಸಲಿದ್ದಾರೆ.
ಹರಪನಹಳ್ಳಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿಗೆ ಪಕ್ಷದ ವರಿಷ್ಠರು ಟಿಕೆಟ್ ನೀಡಿರುವುದರಿಂದ ಆಕಾಂಕ್ಷಿಯಾಗಿರುವ ಕೊಟ್ರೇಶ್ ಕೂಡ ಬಿಜೆಪಿ ತೊರೆಯುವ ಆಲೋಚನೆಯಲ್ಲಿದ್ದಾರೆ.

ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಬಸವರಾಜ ನಾಯಕ್ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಮಾಜಿ ಸಚಿವರಾದ ರೇವೂನಾಯಕ್ ಬೆಳಮಗಿ, ಎಸ್.ಕೆ.ಬೆಳ್ಳುಬ್ಬಿ ಕೂಡ ಬಿಜೆಪಿ ತೊರೆದು ತೆನೆ ಹೊತ್ತ ಮಹಿಳೆಯತ್ತ ನೋಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕೂಡ ಬಿಜೆಪಿ ಭಿನ್ನಮತ ಭುಗಿಲೆದ್ದಿದೆ. ಮಾಜಿ ಶಾಸಕರಾದ ಸುರೇಶ್ ಮಾರಿಹಾಳ, ಮೆಟಗುಡ್ಡ , ಬ್ಯಾಡಗಿಯ ಸುರೇಶ್ ಗೌಡ, ಬಿಜೆಪಿ ಬಿಟ್ಟು ಜೆಡಿಎಸ್‍ಗೆ ಹೋಗುವ ಸಂಭವವಿದೆ.

ಬಿಜೆಪಿಯಲ್ಲಿ ಟಿಕೆಟ್ ವಂಚಿತರು ಅನ್ಯ ಪಕ್ಷಗಳತ್ತ ಮುಖ ಮಾಡಿರುವುದು ಕಮಲ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಭಿನ್ನಮತೀಯರನ್ನು ಸಮಾಧಾನಪಡಿಸುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಸೂಚಿಸಲಾಗಿತ್ತು.
ಆದರೆ ಈಗಾಗಲೇ ಪಕ್ಷದಿಂದ ಒಂದು ಹೆಜ್ಜೆ ಮುಂದೆ ಹೋಗಿರುವ ಭಿನ್ನಮತಿಯರು ಮಾತೃ ಪಕ್ಷದತ್ತ ಮುಖ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ